ಕಾವ್ಯ ಸಾವು ಕೋಮು ದ್ವೇಷ ಬಿತ್ತುವ ಪ್ರಯತ್ನ; ಹಿಂದೂ ಸಾಮ್ರಾಟ್ ಧರ್ಮಸೇನೆಯ ರಾಜ್ಯಾಧ್ಯಕ್ಷರ ವಿರುದ್ದ ಫ್ರ್ಯಾಂಕ್ಲಿನ್ ಮೊಂತೆರೊ ದೂರು
ಮಂಗಳೂರು: ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಸಾವಿನ್ನು ದಾಳವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ಮಾಡಿಕೊಡುತ್ತಿರುವ ಹಾಗೂ ದ್ವೇಷ ಬಿತ್ತುತ್ತಿರುವ ವ್ಯಕ್ತಿ ಹಾಗೂ ಆತನ ಹೇಳಿಕೆಯ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮಂಗಳೂರು ಇದರ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೊ ಅವರು ಕಾವೂರು ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ದೂರಿನಲ್ಲಿ ಮಾಹಿತಿ ನೀಡಿರುವ ಫ್ರ್ಯಾಂಕ್ಲಿನ್ ಮೊಂತೆರೊ ಅವರು ದ.ಕ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದ ಕುಮಾರಿ ಕಾವ್ಯ ಎಂಬ ವಿದ್ಯಾರ್ಥಿನಿ ಜುಲೈ 20 ರಂದು ವಿದ್ಯಾಸಂಸ್ಥೆಗೆ ಸಂಬಂಧಪಟ್ಟ ಆವರಣದೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತಯಾಗಿದ್ದಳು ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಸದ್ರಿ ಸಾವಿನ ಕುರಿತು ಒಂದೆರಡು ದೃಶ್ಯಮಾಧ್ಯಮಗಳು ನಿರಂತರವಾಗಿ ಸುದ್ದಿಯನ್ನು ಬಿತ್ತರಿಸಿ ಪ್ರಕರಣವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಮುಖ ವಿಷಯವನ್ನಾಗಿ ಬಹಿರಂಗ ಮಾಡಿದರು. ಇದು ಸದ್ರಿ ದೃಶ್ಯ ಮಾಧ್ಯಮದ ವೃತ್ತಿ ಧರ್ಮಕ್ಕೆ ಸಂಬಂಧಿಸಿದ ವಿಷಯವಾಗಿರುತ್ತದೆ.
ಆದರೂ ಹಿಂದೂ ಸಾಮ್ರಾಟ್ ಧರ್ಮಸೇನೆಯ ರಾಜ್ಯಾಧ್ಯಕ್ಷ ತಾನೆಂದು ಹೇಳಿಕೊಂಡು ಅತುಲ್ ಕುಮಾರ್ ಎಂಬ ವ್ಯಕ್ತಿಯು ಸ್ವಯಂ ಚಿತ್ರೀಕರಿಸಿದ ವೀಡಿಯೋ ಮುಖಾಂತರ ಕಾವ್ಯಾಳ ಸಾವಿಗೆ ಸಂಬಂಧಿಸಿ ನಡೆಯುತ್ತಿರುವ ಪ್ರತಿಭನೆ ಹಾಗೂ ದ್ರಶ್ಯಮಾಧ್ಯಮಗಳಲ್ಲಿ ಬಿತ್ತರಿಸಲ್ಪಡುತ್ತಿರುವ ಸುದ್ದಿಗಳ ಹಿಂದೆ ಕ್ರೈಸ್ತ ವಿದ್ಯಾಸಂಸ್ಥೆಗಳ ಹಾಗೂ ಕ್ರೈಸ್ತ ಮಿಶನರಿಗಳ ಕೈವಾಡವಿದೆಯೆಂದು ಆರೋಪಿಸಿ ವಿನಃ ಕಾರಣ ಅವರ ಮೇಲೆ ಆಪಾದನೆಯನ್ನು ಮಾಡಿರುತ್ತಾನೆ. ಈತನ ಈ ಹೇಳಿಕೆಯಿಂದದಾಗಿ ಸಮಾಜದಲ್ಲಿ ಸಾಮರಸ್ಯದ ಜೀವನ ನಡೆಸುತ್ತಿರುವ ಹಿಂದೂ ಹಾಗೂ ಕ್ರೈಸ್ತ ಸಮುದಾಯಗಳು ಪರಸ್ಪರ ಸಂಶಯದ ದೃಷ್ಟಿಯಿಂದ ನೋಡುವ ಸಾಧ್ಯತೆ ಹಾಗೂ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಂದರ್ಭಗಳು ಸಾಕಷ್ಟಿದೆ. ಮಾತ್ರವಲ್ಲದೆ ಯಾವುದೇ ಕಾರಣಕ್ಕೂ ಈ ಪ್ರಕರಣದೊಂದಿಗೆ ಗುರುತಿಸಲ್ಪಡದೆ ಇರುವ ಕ್ರೈಸ್ತ ಸಮುದಾಯದ ಬಂಧುಗಳಿಗೆ ಮಾನಸಿಕ ಹಾಗೂ ಸಾಮಾಜಿಕ ಅವಮಾನ ಮಾಡಿದಂತಾಗಿದೆ.ಇದರಿಂದಾಗಿ ಅವರು ಮುಂದಿನ ದಿನಗಳಲ್ಲಿ ಭಯದಿಂದ ಜೀವನ ನಡೆಸುವ ಪರಿಸ್ಥಿತಿ ಉಂಟಾದಿತು ಆದುದರಿಂದ ಯಾವುದೇ ದಾಖಲೆಗಳಿಲ್ಲದೆ ಕೇವಲ ಪ್ರಚಾರಕ್ಕಾಗಿ ಕ್ರೈಸ್ತ ಸಮುದಾಯದ ವಿರುದ್ಧ ಆಪಾದನೆ ಮಾಡಿರುವ ಈ ಹೇಳಿಕೆಗೆ ಸಂಬಂಧಿಸಿ ಸದ್ರಿ ಅತುಲ್ ಕುಮಾರ್ ಎಂಬ ವ್ಯಕ್ತಿಯ ವಿರುದ್ದ ಸೂಕ್ತ ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿ ದೂರಿನಲ್ಲಿ ಫ್ರಾಂಕ್ಲಿನ್ ಒತ್ತಾಯಿಸಿದ್ದಾರೆ.