ಕಾವ್ಯ ಸಾವು – ನಿಷ್ಪಕ್ಷಪಾತ ತನಿಖೆಗೆ ದಕ ಜಿಲ್ಲಾ ಯುವ ಜೆ.ಡಿ.ಎಸ್ ಅಗ್ರಹ
ಮಂಗಳೂರು: ರಾಷ್ಟ್ರೀಯ ಕ್ರೀಡಾಪಟು, ಮೂಡಬಿದರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾ ದಳ (ಜಾತ್ಯಾತೀತ) ಘಟಕ ಆಗ್ರಹಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಯುವ ಪ್ರತಿಭೆ ವಿದ್ಯಾರ್ಥಿನಿ ಕಾವ್ಯಳ ಅನಿರೀಕ್ಷಿತ ಅಸಹಜ ಸಾವು ಕೇವಲ ಹೆತ್ತವರಿಗಷ್ಟೇ ಅಲ್ಲ, ಸಮಾಜದ ಎಲ್ಲರಿಗೂ ದುಃಖದ ವಿಚಾರವಾಗಿದ್ದು, ಆಕೆಯ ಸಾವಿನ ಬಗ್ಗೆ ಹುಟ್ಟಿರುವ ಸಂಶಯ ಹಾಗೂ ಗೊಂದಲಗಳನ್ನು ನಿವಾರಿಸುವುದು ಶಿಕ್ಷಣ ಸಂಸ್ಥೆ ಮತು ಜಿಲ್ಲಾಡಳಿತದ ಹೊಣೆಯಾಗಿದೆ. ಈ ಬಗ್ಗೆ ಪೂರ್ವಾಗ್ರಹಗಳಿಲ್ಲದೆ, ಮುಕ್ತವಾದ ಸ್ವತಂತ್ರ ತನಿಖೆ ನಡೆಸಿ ಜನರ ಮನಸ್ಸಿನಲ್ಲಿರುವ ಸಂಶಯಗಳನ್ನು ನಿವಾರಿಸುವುದಲ್ಲದೆ, ಉಳಿದ ವಿದ್ಯಾರ್ಥಿಗಳ ಆತ್ಮ ವಿಶ್ವಾಸ ಕುಂದದಂತೆ, ಅವರ ಹೆತ್ತವರಲ್ಲಿ ಆತಂಕವುಂಟಾಗದಂತೆ ನೋಡಿಕೊಳ್ಳುವುದು ಜವಬ್ದಾರಿಯುತ ನಾಗರಿಕರೆಲ್ಲರ ಕರ್ತವ್ಯ. ಈ ದೃಷ್ಠಿಯಿಂದ ವದಂತಿಗಳನ್ನು ನಂಬದೆ, ಸಮಗ್ರ ತನಿಖೆಯನ್ನು ನಡೆಸಿ ಸತ್ಯಾಂಶವನ್ನು ಬಯಲಿಗೆಳೆಯಲು ವಿಶೇಷವಾದ ತನಿಖಾ ತಂಡ ರಚಿಸಿ ‘ಕಾವ್ಯಳ’ ಸಾವಿನ ನಿಜಕಾರಣ ತಿಳಿಯುವಂತಾಗಬೇಕು ಹಾಗೂ ಕಾವ್ಯಳ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅಗ್ರಹಿಸಿದ್ದಾರೆ.