ಕಾವ್ಯಾ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಆಗ್ರಹ

Spread the love

ಕಾವ್ಯಾ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಆಗ್ರಹ

ಉಡುಪಿ: ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣದಲ್ಲಿ ಸಾರ್ವಜನಿಕರ ಸಂದೇಹ ನಿವಾರಣೆಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಅವರು, ಪ್ರತಿಷ್ಠಿತ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿನಿಲಯದಲ್ಲಿ ಕಾವ್ಯಾ ಆತ್ಮಹತ್ಯೆಗೆ ಶರಣಾಗಿದ್ದು, ಕ್ರೀಡಾ ತರಬೇತಿ ಬಗ್ಗೆ ಆಕೆ ತಾಯಿ ಹಾಗೂ ಶಿಕ್ಷಣ ಸಂಸ್ಥೆ ನೀಡಿದ ಹೇಳಿಕೆಯಲ್ಲಿ ವ್ಯತ್ಯಾಸವಿದೆ. ಹೀಗಾಗಿ ಸಮಾಜದಲ್ಲಿ ಗೊಂದಲ ಉಂಟಾಗಿದ್ದು,  ಸೂಕ್ತ ತನಿಖೆ ನಡೆಸಬೇಕು. ಸರಕಾರ ಹಾಗೂ ಶಿಕ್ಷಣ ಸಂಸ್ಥೆ ಕುಟುಂಬಕ್ಕೆ  ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೂ ಈ ಬಗ್ಗೆ ಮನವಿ ನೀಡಲಾಗಿದೆ. ಶಿಕ್ಷಣ ಕಾಶಿ ಎಂದು ಹೆಸರಾದ ದ.ಕ. ಜಿಲ್ಲೆಯಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಕೋಟೆಯನ್ನು ಕಟ್ಟಿಕೊಂಡಿವೆ. ಹೊರ ಜಗತ್ತಿಗೆ ಅಲ್ಲಿನ ವಿಚಾರಗಳು ಬೆಳಕಿಗೆ ಬರುತ್ತಿಲ್ಲ. ಪೋಲೀಸರು ಇಂಥ ಸಂಸ್ಥೆಗಳ ಬಗ್ಗೆ ನಿಗಾ ಇಡಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಲೇಜು ಆಡಳಿತ ಮಂಡಳಿ ಪರವಾಗಿ ಹೇಳಿಕೆ ನೀಡಿದ್ದು, ಇದು ಅವರಿಗೆ ಶೋಭೆ ತರುವುದಿಲ್ಲ. ಮಾಧ್ಯಮದವರು ತೀರ್ಪು ಕೊಡುವುದು ಸರಿಯಲ್ಲ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿಯವರಿಗೆ ಕೂಡ ಪ್ರಚಾರ ನೀಡುವುದು ಕೂಡ ಮಾಧ್ಯಮ ಎನ್ನುವುದು ಅವರು ಮರೆತಿದ್ದಾರೆ. ಮಾಜಿ ಮುಖ್ಯಮಂತ್ರಿಯವರ  ಹೇಳಿಕೆಯನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ ಎಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ ಮಾತನಾಡಿ ರಾಜ್ಯ ಸರಕಾರ ಘಟನೆಯ ಕುರಿತು ತನ್ನ ಕೆಲಸವನ್ನು ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕಾವ್ಯಾಳ ಮನೆಯವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದು, ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಯುವ ಕಾಂಗ್ರೆಸ್ ಕೂಡ ಕಾವ್ಯಾಳ ಸಾವಿನ ಕುರಿತು ಇರುವ ಸಂದೇಹಗಳನ್ನು ದೂರ ಮಾಡುವ ಕೆಲಸವನ್ನು ಪೋಲಿಸ್ ಇಲಾಖೆ ಮಾಡಬೇಕು ಎಂದು ಒತ್ತಾಯಿಸುತ್ತದೆ ಎಂದರು.

ಕಾರ್ಯದರ್ಶಿ ರಮೇಶ್ ಶೆಟ್ಟಿ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಕಾಪು ಕ್ಷೇತ್ರದ ಅಧ್ಯಕ್ಷ ಮೆಲ್ವಿನ್ ಡಿಸೋಜಾ, ಐಟಿ ಸೆಲ್‍ನ ಅಧ್ಯಕ್ಷ ನೀರಜ್ ಪಾಟೀಲ್ ಮೊದಲಾದವರಿದ್ದರು.


Spread the love