ಕುಂದಾಪುರ: ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ) ಶಾಖಾ ಕಚೇರಿ ಉದ್ಘಾಟನೆ
ಕುಂದಾಪುರ: ಕನಸು ನನಸುಗೊಳಿಸುವ ಉದ್ದೇಶದಿಂದ ಊರು ಬಿಟ್ಟು ಹೋದ ಬಳಿಕ ಹುಟ್ಟೂರ ಸಂಪರ್ಕ ಇರಲಿಲ್ಲ. ಹುಟ್ಟೂರಿಗೆ ಇನ್ನಷ್ಟು ಹತ್ತಿರವಾಗಬೇಕು, ದುಡಿಮೆಯ ಒಂದು ಪಾಲನ್ನು ನನ್ನೂರಿನ ಜನತೆಗೆ ಕೊಡಬೇಕು ಎನ್ನುವ ಉದ್ದೇಶದಿಂದ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ) ಕೆಲಸ ಮಾಡಲಿದೆ. ಇದು ನನ್ನ ಜೀವನದ ಮಹತ್ವದ ಕ್ಷಣ ಎಂದು ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಹೇಳಿದರು.
ಇಲ್ಲಿನ ಹುಣ್ಸೆಮಕ್ಕಿ ಸಮೀಪದ ತಲ್ಮಕ್ಕಿ ಸಮೃದ್ದಿ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ) ಮೂಡುಬಿದ್ರೆ ಇದರ ನೂತನ ಶಾಖಾ ಕಛೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಧಿಸುವ ಛಲವಿದ್ದರೆ ಏನಾದರೂ ಸಾಧಿಸಬಹುದು. ಅತ್ಯಂತ ಕಡು ಬಡತನದಿಂದ ನಾನು ಬರಿಗೈಯ್ಯಲ್ಲಿ ಊರು ಬಿಟ್ಟು ಹೋದವನು. ಸ್ವ ಪರಿಶ್ರಮದಿಂದಲೇ ಇಂದು ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದ್ದೇನೆ. ಈಗಾಗಲೇ ಮೂಡುಬಿದ್ರೆಯಲ್ಲಿರುವ ನನ್ನ ಸಂಸ್ಥೆಯ ಹೆಸರಿನಲ್ಲಿ ವರ್ಷಕ್ಕೆ 3 ರಿಂದ 5 ಕೋಟಿ ರೂ. ನಷ್ಟು ನೆರವು ನೀಡುತ್ತಿದ್ದೇವೆ. ಈ ಕೆಲಸವನ್ನು ನನ್ನ ಹುಟ್ಟೂರ ಜನರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಚೇರಿ ತೆರೆದಿದ್ದೇವೆ. ಊರು ಬೆಳೆಯಬೇಕಾದರೆ ಹಣ ಮುಖ್ಯವಲ್ಲ. ಆ ಊರಿನ ಸಂಪನ್ಮೂಲ ಅಭಿವೃದ್ದಿ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಕೇವಲ ನೆರವು ಮಾತ್ರವಲ್ಲದೇ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವತ್ತ ಟ್ರಸ್ಟ್ ಕೆಲಸ ಮಾಡಲಿದೆ ಎಂದರು.
ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ಬಣ್ಣ ಶೆಟ್ಟಿ, ನೋವು ಅನುಭವಿಸುತ್ತಿರುವವರ ಕಣ್ಣೀರು ಒರೆಸುವ ಕೆಲಸ ನಿಜಕ್ಕೂ ಪುಣ್ಯದ ಕೆಲಸ ಎಂದರು.
ಇದೇ ಸಂದರ್ಭ 3 ಗ್ರಾಮ ಪಂಚಾಯತ್ ವ್ಯಾಪ್ತಿಯ 5 ಗ್ರಾಮಗಳ ಅಶಕ್ತರಿಗೆ ವಿವಾಹ, ಶೈಕ್ಷಣಿಕ, ವೈದ್ಯಕೀಯ ನೆರವನ್ನು ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ಪ್ರವರ್ತಕ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಟಸ್ಟ್ ನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಉಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.