ಕುಂದಾಪುರ ತಾಪಂ ಅಧ್ಯಕ್ಷರಾಗಿ ಎಚ್. ಇಂದಿರಾ ಶೆಟ್ಟಿ ಅವಿರೋಧ ಆಯ್ಕೆ

Spread the love

ಕುಂದಾಪುರ ತಾಪಂ ಅಧ್ಯಕ್ಷರಾಗಿ ಎಚ್. ಇಂದಿರಾ ಶೆಟ್ಟಿ ಅವಿರೋಧ ಆಯ್ಕೆ

ಕುಂದಾಪುರ: ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಕೆ.ರಾಜು ಅವರ ನೇತ್ರತ್ವದಲ್ಲಿ ನಡೆದ ನೂತನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಎಚ್.ಇಂದಿರಾ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

37 ಸದಸ್ಯ ಬಲವಿದ್ದ ಕುಂದಾಪುರ ತಾಲ್ಲೂಕು ಪಂಚಾಯಿತಿ, ನೂತನವಾಗಿ ಬೈಂದೂರು ತಾಲ್ಲೂಕು ರಚನೆಯಾದ ಬಳಿಕ ಬೈಂದೂರು ಹಾಗೂ ಕುಂದಾಪುರ ತಾಲ್ಲೂಕು ಪಂಚಾಯಿತಿಯಾಗಿ ಬೇರೆ ಬೇರೆಯಾಗಿತ್ತು. 14 ಸದಸ್ಯರು ಬೈಂದೂರು ತಾಲ್ಲೂಕು ಪಂಚಾಯಿತಿಯಲ್ಲಿ ಹಿಂದೆ ಅವಿಭಜಿತ ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಶ್ಯಾಮಲಾ ಕುಂದರ್ ಅವರು ಸೇರಿದ್ದರಿಂದಾಗಿ ಕುಂದಾಪುರ ತಾಲ್ಲೂಕು ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆದಿತ್ತು. ಉಪಾಧ್ಯಕ್ಷರಾಗಿ ರಾಮ್ಕಿಶನ್ಹೆಗ್ಡೆ ಮುಂದುವರೆದಿದ್ದಾರೆ.

ಹಿಂದೆ ಅಂಗನವಾಡಿ ಶಿಕ್ಷಕಿಯಾಗಿದ್ದ ಇಂದಿರಾ ಶೆಟ್ಟಿ ಹರ್ಕೂರು ಹುದ್ದೆ ರಾಜಿನಾಮೆ ನೀಡಿ ರಾಜಕೀಯ ಕ್ಷೇತ್ರವನ್ನು ಪ್ರತಿನಿಧಿಸಿ ವಂಡ್ಸೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆಯಾಗಿದ್ದರು. ವಂಡ್ಸೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮೀಸಲಾತಿ ಬದಲಾವಣೆಯಾಗಿದ್ದರಿಂದ ಅವರು ಆಲೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಸ್ವೀಕಾರದ ಬಳಿಕ ನಡೆದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಬೆಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ರಾಜಕೀಯದಲ್ಲಿ ಯೋಗ ನಿಂತ ನೀರಲ್ಲ. ಅವಕಾಶಗಳು ಬಂದಾಗ ಅದನ್ನು ಸದುಪಯೋಗ ಪಡಿಸಿಕೊಳ್ಳುವುದೆ ಜಾಣತನ. ಸಮಾಜ ಸೇವೆಯ ಅನುಭವ ಇರುವ ಇಂದಿರಾ ಶೆಡ್ತಿಯವರ ನೇತ್ರತ್ವದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಕುಂದಾಪುರದ ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು ಅಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯನ್ನು ಪೂರೈಸಿ, ನೂತನ ಅಧ್ಯಕ್ಷರಿಗೆ ಪುಷ್ಟ ಗುಚ್ಛವನ್ನು ನೀಡಿ ಅಭಿನಂದನೆ ಸಲ್ಲಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ್ಶೆಟ್ಟಿಗಾರ್ಇದ್ದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ್ಕಿಶನ್ಹೆಗ್ಡೆ, ಬಿಜೆಪಿ ಕುಂದಾಪುರ ಮಂಡಲ ಶಂಕರ್ ಅಂಕದಕಟ್ಟೆ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ, ಬಿಜೆಪಿ ಪಕ್ಷದ ಪ್ರಮುಖರಾದ ಮೋಹನ್ದಾಸ್ಶೆಣೈ, ಸದಾನಂದ ಉಪ್ಪಿನಕುದ್ರು, ಕಾಡೂರು ಸುರೇಶ್ಶೆಟ್ಟಿ, ಸದಾನಂದ ಬಳ್ಕೂರು, ಸಂತೋಷ್ಶೆಟ್ಟಿ, ಸತೀಶ್ಪೂಜಾರಿ ವಕ್ವಾಡಿ ಇದ್ದರು.


Spread the love