ಕುಂದಾಪುರ: ಫ್ಲೈಓವರ್ನಿಂದ ಸರ್ವಿಸ್ ರಸ್ತೆಗೆ ಉರುಳಿ ಬಿದ್ದ ಕಾರು: ಓರ್ವ ಮೃತ್ಯು, ಇಬ್ಬರು ಗಂಭೀರ
ಕುಂದಾಪುರ: ಕಾರು ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪಲ್ಟಿಯಾದ ಪರಿಣಾಮ ಒರ್ವ ವ್ಯಕ್ತಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೆ ಎಸ್ ಆರ್ ಟಿಸಿ ಡಿಪೋ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ.
ಮೃತರ ಹಾಗೂ ಗಾಯಾಳುಗಳ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಇನ್ನೋವಾ ಕಾರಿನಲ್ಲಿದ್ದ ಮೂವರು ಪಾಂಡೀಚೆರಿಯವರಾಗಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದರ್ಶನ ಮುಗಿಸಿ ವಾಪಾಸು ಪಾಂಡಿಚೇರಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಕಾರು ಅತಿವೇಗದಿಂದ ಚಲಿಸುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕದ ಸರ್ವಿಸ್ ರಸ್ತೆಗೆ ಉರುಳಿ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ಕಬ್ಬಿಣದ ಗ್ರಿಲ್ ಗಳು ಮುರಿದು ಹೋಗಿದ್ದು ಗಾಯಾಳುಗಳ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ. ಅವಘಡ ನಡೆದ ಸಮಯದಲ್ಲಿ ರಸ್ತೆಯಲ್ಲಿ ಅದೃಷ್ಠವಶಾತ್ ಹೆಚ್ಚಿನ ವಾಹನಗಳು ಇರಲಿಲ್ಲ ಎಂದು ತಿಳಿದು ಬಂದಿದೆ.
ಘಟನೆಯಿಂದ ಸ್ವಲ್ಪ ಸಮಯ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.