ಕುಂದಾಪುರ: ಮೂರು ಮುತ್ತು ಖ್ಯಾತಿಯ ಅಶೋಕ್ ಶ್ಯಾನುಭಾಗ್ ನಿಧನ
ಕುಂದಾಪುರ: ದಕ್ಷಿಣ ಕನ್ನಡ ಭಾಗದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ರೂಪಕಲಾ ನಾಟಕ ತಂಡದ ಮೂರು ಮುತ್ತು ಖ್ಯಾತಿಯ ಅಶೋಕ್ ಶ್ಯಾನುಭಾಗ್ (54 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ.
ಕುಂದಾಪುರದ ಪಟ್ಟಣ್ ಶೇಟ್ ಹುಲಿಮನೆ ದಿ.ನಾರಾಯಣ ಶ್ಯಾನುಭಾಗ್ ಹಾಗೂ ದಿ. ಕಸ್ತೂರಿ ಶ್ಯಾನುಭಾಗ್ ಅವರ ಪುತ್ರ ಅಶೋಕ್ ಶ್ಯಾನುಭಾಗ್ ಅವರು 1979ರಲ್ಲಿ ರೂಪಕಲಾ ಸಂಸ್ಥೆಯಲ್ಲಿ ಬಾಲ ಕಲಾವಿದರಾಗಿ ಸತ್ಯ ಹರಿಶ್ಚಂದ್ರ, ಟಿಪ್ಪು ಸುಲ್ತಾನ್ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಶಿಕ್ಷಣದ ಬಳಿಕ ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಕಿರುತೆರೆಗಳಲ್ಲಿಯೂ ಮಿಂಚಿದ್ದರು. ಮೂರುಮುತ್ತು ನಾಟಕ ಅವರಿಗೆ ಹೊಸ ತಿರುವು ನೀಡಿತ್ತು. ರೂಪಕಲಾ ತಂಡದಲ್ಲಿ ಅವರ ಪ್ರತಿಭೆ ಪ್ರಕಾಶಮಾನವಾಗಿ ಬೆಳಗಿತ್ತು. ದಿ.ಬಾಲಕೃಷ್ಣ ಪೈ ಅವರ ಕಲ್ಪನೆಯಂತೆ ಅಶೋಕ ಶ್ಯಾನುಭಾಗ್ ಅವರು ರಮಾನಂದನ ಪಾತ್ರವನ್ನು ಕಟ್ಟಿಕೊಟ್ಟಿದ್ದರು. ಆ ಕಾರಣದಿಂದಾಗಿ ಕುಳ್ಳಪ್ಪು ಅವರ ನೆಚ್ಚಿನ ಶಿಷ್ಯರಾಗಿ ಅಶೋಕ್ ಶ್ಯಾನುಭಾಗ್ ಗುರುತಿಸಿಕೊಂಡಿದ್ದರು. ಮಜಾ ಟಾಕೀಸ್ನಲ್ಲಿಯೂ ಕೂಡಾ ಮೋಡಿ ಮಾಡಿದ್ದರು.
ರೂಪಕಲಾ ಸಂಸ್ಥೆಯ ದಿ. ಬಾಲಕೃಷ್ಣ ಪೈ (ಕುಳ್ಳಪ್ಪು) ಅವರ 53 ನಾಟಕಗಳಲ್ಲಿ ಹಾಗೂ ಸತೀಶ್ ಪೈ ಅವರ 11 ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೂಪಕಲಾ ಸಂಸ್ಥೆಯ ನಾಟಕಗಳು ಕನ್ನಡ ಮತ್ತು ಕೊಂಕಣಿಯಲ್ಲಿ ಏಳು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಂಡಿದ್ದವು.
ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಕಲಾವಿದ ಅಶೋಕ್ ಶ್ಯಾನುಭಾಗ್ ಅವರು ಹಾಸ್ಯಪಾತ್ರಗಳ ಮೂಲಕವೇ ದೊಡ್ಡ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿದ್ದರು. ನಗಿಸುವ ವಿಶೇಷ ಕೌಶಲ್ಯವನ್ನು ಹೊಂದಿದ್ದ ಅವರು ತನ್ನ ವಿಶಿಷ್ಠವಾದ ಸ್ವರದ ಮೂಲಕ ಜನಮನ ರಂಜಿಸಿದ್ದರು.
ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.