ಕುಂದಾಪುರ: ರೈಲು ಖಾಸಗೀಕರಣದ ವಿರುದ್ಧ ಸಿ.ಐ.ಟಿ.ಯು ನೇತೃತ್ವದಲ್ಲಿ ಪ್ರತಿಭಟನೆ

Spread the love

ಕುಂದಾಪುರ: ರೈಲು ಖಾಸಗೀಕರಣದ ವಿರುದ್ಧ ಸಿ.ಐ.ಟಿ.ಯು ನೇತೃತ್ವದಲ್ಲಿ ಪ್ರತಿಭಟನೆ

ಕುಂದಾಪುರ: ರೈಲ್ವೆ ಖಾಸಗೀಕರಣ ಕೇಂದ್ರ ಸರಕಾರದ ಭ್ರಷ್ಟಾಚಾರದ ಮತ್ತೊಂದು ಮುಖ. ರೈಲು ಜನರ ಜೀವನಾಡಿ ಅದು ಸೇವಾ ಕ್ಷೇತ್ರ ಎಂಬುವುದನ್ನು ಮರೆತು ಲಾಭದ ಕ್ಷೇತ್ರವನ್ನಾಗಿ ಮಾಡಲು ಬಂಡವಾಳಗಾರರಿಗೆ ನೀಡಿ ಜನರ ಲೂಟಿಗೆ ಲಾಕ್ ಡೌನ್ ನಂತಹ ಸಂಕಷ್ಟದ ದಿನಗಳಲ್ಲೇ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್ ಆರೋಪಿಸಿದರು.

ಅವರು ಶುಕ್ರವಾರ ಸಿಐಟಿಯು ನೇತೃತ್ವದಲ್ಲಿ ಕುಂದಾಪುರದ ರೈಲು ನಿಲ್ದಾಣದದಲ್ಲಿ ನಡೆದ ರೈಲು ಖಾಸಗೀಕರಣದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಖಾಸಗೀಕರಣದಿಂದ ನಿರುದ್ಯೋಗ ಮತ್ತಷ್ಟು ಉಲ್ಬಣಗೊಳ್ಳಲಿದೆ. ಆರ್ಥಿಕ ಸಂಕಷ್ಟ ಹೆಚ್ಚಾಗಲಿದ್ದು ಸರಕಾರಕ್ಕೆ ಬೃಹತ್ ಪ್ರಮಾಣದ ಆದಾಯಕ್ಕೆ ಕುತ್ತು ಬರಲಿದೆ. ರೈಲ್ವೆ ಖಾಸಗೀಕರಣ ದೇಶದ ಅಭಿವ್ರದ್ಧಿಗೆ ಮಾರಕ ಎಂದರು.

ಸಿಐಟಿಯು ತಾಲೂಕು ಸಂಚಾಲಕ ಎಚ್ ನರಸಿಂಹ ಮಾತನಾಡಿ, ರೈಲ್ವೆಯ 4.61.487 ಹೆಕ್ಟೇರ್ ಭೂಮಿ, 15 ಸಾವಿರ ರೈಲುಗಳು, 192 ರೈಲು ಮಾರ್ಗಗಳು ದೇಶದ ಸಂಪತ್ತು ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುತ್ತಿರುವುದು ದುರಂತ. ದೇಶ ಆಳುತ್ತಿರುವವರು ನಕಲಿ ದೇಶಪ್ರೇಮಿಗಳು ಎಂದು ಮತ್ತೆ ಸಾಬೀತಾಗುತ್ತಿದೆ ಎಂದರು.

ಸರಕಾರದ ಈ ನಿರ್ಧಾರದಿಂದ 19 ಲಕ್ಷ ಜನ ನೌಕರರು ಅವರ ಕುಟುಂಬಗಳು ಬೀದಿಗೆ ಬೀಳಲಿದೆ. ಸರಕಾರ ಖಾಸಗೀಕರಣ ಕೈ ಬಿಡಬೇಕು ಇಲ್ಲವಾದಲ್ಲಿ ನೌಕರರ ಸಂಘಟನೆ ಜೊತೆ ಸೇರಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಸುರೇಶ್ ಕಲ್ಲಾಗರ, ಮಹಾಬಲ ವಡೇರ ಹೋಬಳಿ, ಬಲ್ಕೀಸ್ ಇದ್ದರು.

ಈ ಸಂದರ್ಭದಲ್ಲಿ ಸ್ಟೇಷನ್ ಮಾಸ್ಟರ್ ಪ್ರಶಾಂತ್ ಶೆಟ್ಟಿ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಲಾಯಿತು.


Spread the love