ಕುಂದಾಪುರ : ಶಂಕರನಾರಾಯಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಓಮಿನಿ ಕಾರಿನಲ್ಲಿ ಕುಳ್ಳಿರಿಸಿಕೊಂಡು, ಮಾನಭಂಗಕ್ಕೆ ಯತ್ನಿಸಿದ ಆರೋಪಿ ಯಡಮೊಗೆ ಗ್ರಾ. ಪಂ. ಉಪಾಧ್ಯಕ್ಷ ಬಾಲಚಂದ್ರ ಕುಲಾಲನ ಬಂಧನ ಹಾಗೂ ಪಂ. ಸದಸ್ಯತ್ವ ರದ್ದತಿಗಾಗಿ ಬಿಜೆಪಿ, ಮಹಿಳಾ ಸಂಘಟನೆ, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳಿಂದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ಜರಗಿದವು.
ಯಡಮೊಗೆ ಗ್ರಾ. ಪಂ. ಎದುರು ಬಿಜೆಪಿ, ಕರ್ನಾಟಕ ಕಾರ್ಮಿಕ ವೇದಿಕೆ, ಯಡಮೊಗೆ ಗ್ರಾಮಸ್ಥರು, ವಿವಿಧ ಮಹಿಳಾ ಸಂಘಟನೆ, ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಬಾಲಚಂದ್ರನ ವಿರುದ್ಧ ಘೋಷಣೆ ಕೂಗುವುದರ ಮೂಲಕ ಪ್ರತಿಕೃತಿ ದಹಿಸಿದರು. ಬಾಲಚಂದ್ರ ಕುಲಾಲನ ಬಂಧಿಸಬೇಕು ಹಾಗೂ ಗ್ರಾ. ಪಂ. ಸದಸ್ಯತ್ವ ರದ್ದತಿಗೊಳ್ಳಿಸಬೇಕು. ಕಾಂಗ್ರೆಸ್ ಪಕ್ಷ ಬಾಲಚಂದ್ರ ಕುಲಾಲನನ್ನು ಪಕ್ಷದಿಂದ ಕೈ ಬೀಡಬೇಕು ಎಂದು ಆಗ್ರಹಿಸಿದರು. ನಂತರ ಗ್ರಾ. ಪಂ.ಗೆ ಮನವಿ ನೀಡಿದರು.
ಶಂಕರನಾರಾಯಣ ಪೇಟೆಯಲ್ಲಿ ಶಂಕರನಾರಾಯಣ ಕಾಲೇಜಿನ ವಿದ್ಯಾರ್ಥಿ ಪರಿಷತ್, ಎಬಿವಿಪಿ, ಶಂಕರನಾರಾಯಣ ಸರಕಾರಿ ಪದವಿ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ವೇದಿಕೆ ಹೀಗೆ ನಾನಾ ಸಂಘಟನೆಗಳು ಪ್ರತಿಭಟನೆಯ ನೇತ್ರತ್ವವನ್ನು ವಹಿಸಿಕೊಂಡು, ಅರ್ಧ ಗಂಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಬಾಲಚಂದ್ರ ಕುಲಾಲನ ವಿರುದ್ಧ ಮಹಿಳಾ ಲೈಂಗಿಕ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಬಂಧಿಸುವಂತೆ ಆಗ್ರಹಿಸಿ, ಶಂಕರನಾರಾಯಣ ಪೆÇಲೀಸರಿಗೆ ಮನವಿ ನೀಡಿದರು.
ಇತ್ತ ಪ್ರಕರಣ ಗಂಭೀರ ತಿರುವು ಪಡೆದುಕೊಳ್ಳುತ್ತಿರುವುದರ ಹಿನ್ನೆಲೆಯಲ್ಲಿ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಶಂಕರನಾರಾಯಣ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿ ಬಾಲಚಂದ್ರ ಕುಲಾಲ ತಲೆಮರೆಸಿಕೊಂಡಿದ್ದಾನೆ.