ಕುಂದಾಪುರ: ಸೇತುವೆಯಿಂದ ನದಿಗೆ ಜಿಗಿದ ಛಾಯಾಗ್ರಾಹಕನ ಶವ ಪತ್ತೆ
ಕುಂದಾಪುರ: ಮಂಗಳವಾರ ಸಂಜೆ ಕಂಡ್ಲೂರು ಸೇತುವೆಯಿಂದ ನದಿಗೆ ಜಿಗಿದು ನಾಪತ್ತೆಯಾಗಿದ್ದ ಛಾಯಾಗ್ರಾಹಕ ಹರೀಶ್ ಕಾಳಾವರ (44) ಅವರ ಮೃತದೇಹ ಗುರುವಾರ ಆನಗಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ.
ಕೌಟುಂಬಿಕ ಕಲಹದ ಕಾರಣದಿಂದ ಮಂಗಳವಾರ ಕಂಡ್ಲೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ಮುಗಿಸಿ ರಿಕ್ಷಾದಲ್ಲಿ ಹಿಂತಿರುಗುತ್ತಿದ್ದ ವೇಳೆ ಕಂಡ್ಲೂರು ಸೇತುವೆ ಬಳಿ ಹರೀಶ್ ರಿಕ್ಷಾ ಚಾಲಕನಲ್ಲಿ ತಾನು ಮನೆಯಿ೦ದ ತಂದಿದ್ದ ದೇವರ ತಾಯತ ಮತ್ತು ನೂಲುಗಳನ್ನು ನದಿಗೆ ಬಿಸಾಡಲು, ರಿಕ್ಷಾವನ್ನು ನಿಲ್ಲಿಸುವಂತೆ ಹೇಳಿದ್ದರು. ಚಾಲಕ ರಿಕ್ಷಾದ ವೇಗವನ್ನು ಕಡಿಮೆ ಮಾಡಿದಾಗ, ಏಕಾಏಕಿ ರಿಕ್ಷಾದಿಂದ ಕೆಳಕ್ಕೆ ಇಳಿದು ಸೇತುವೆಯ ತಡೆಬೇಲಿಯನ್ನು ದಾಟಿ ಹರೀಶ್ ತುಂಬಿ ಹರಿಯುತ್ತಿದ್ದ ವಾರಾಹಿ ನದಿಗೆ ಹಾರಿ ಕಣ್ಮರೆಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಕಂಡ್ಲೂರು ಪೊಲೀಸರು ಸ್ಥಳೀಯರು ಹಾಗೂ ಕುಟುಂಬಿಕರ ಸಹಕಾರದಿಂದ ಮಂಗಳವಾರ ಸಂಜೆಯಿಂದಲೇ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದರು. ಬುಧವಾರ ಕುಂದಾಪುರ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಹಾಗೂ ಪ್ರಸಿದ್ಧ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದಲ್ಲಿ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹಾಗೂ ಮಳೆ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಯಲ್ಲಿ ಯಶಸ್ಸು ದೊರಕಿರಲಿಲ್ಲ.
ಕಂಡ್ಲೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ನೂತನ ಅವರ ನೇತೃತ್ವದಲ್ಲಿ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು.
—