ಕುತ್ಪಾಡಿ-ಪಡುಕೆರೆ ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ
ಉಡುಪಿ: ಕುತ್ಪಾಡಿ-ಪಡುಕೆರೆ ಪ್ರದೇಶದಲ್ಲಿ ಕಂಡು ಬಂದಿರುವ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕೆ, ಯುವಜನಸೇವೆ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಹಾನಿಯನ್ನು ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರತಿಬಾರಿ ಉದ್ಯಾವರ ಕನಕೋಡ ಬಳಿ ಸಂಭವಿಸುತ್ತಿದ್ದ ಕಡಲ್ಕೊರೆತ ಈ ಬಾರಿ ಕುತ್ಪಾಡಿ ಪಡುಕೆರೆಯಲ್ಲಿ ಆರಂಭವಾಗಿದೆ. ಇಲ್ಲಿನ ಕಾಂಕ್ರಿಟ್ ರಸ್ತೆಯ ಅಡಿಭಾಗದ ಮರಳು ಸಮುದ್ರ ಪಾಲಾಗಿದೆ. ಇಲ್ಲಿ ಕಡಲ್ಕೊರೆತ ಆರಂಭವಾದ ಕುರಿತು ಇಲ್ಲಿನ ನಿವಾಸಿಗಳು ಫೋನ್ ಮೂಲಕ ತನಗೆ ತಿಳಿಸಿದ್ದು ಕೂಡಲೇ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಈ ಭಾಗದಲ್ಲಿ ತಾತ್ಕಾಲಿಕವಾಗಿ ಕಲ್ಲು ಹಾಕಲು ಸೂಚಿಸಿದ್ದೇನೆ. ಜಿಲ್ಲಾಧಿಕಾರಿಗಳಿಗೆ ನೀಡಿದ ಸೂಚನೆಯಂತೆ ತಕ್ಷಣದಿಂದ ಈ ಭಾಗದ ಸಮುದ್ರಕ್ಕೆ ಕಲ್ಲು ಹಾಕುವ ಕೆಲಸ ಆರಂಭವಾಗಿದ್ದು ರಾತ್ರಿ ಹಗಲು ಇಲ್ಲಿ ಕಲ್ಲು ಹಾಕುವ ಕೆಲಸ ನಡೆಯುತ್ತಿದೆ.
ಈವರೆಗೆ 120 ಮೀಟರ್ ಉದ್ದದಲ್ಲಿ ಸುಮಾರು 150 ಲೋಡ್ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಇನ್ನೂ ಕೂಡ ಕಲ್ಲು ಹಾಕಬೇಕಾಗಿದ್ದು ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಹಣದ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳುವಂತೆ ತಿಳಿಸಿಲಾಗಿದೆ. ಅದೇ ರೀತಿ ಇಲ್ಲಿನ ಕಾಂಕ್ರಿಟ್ ರಸ್ತೆಯನ್ನು ದುರುಸ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇಲ್ಲಿ ಸಮುದ್ರದ ಅಲೆಗಳು ನಾಥು ಸುವರ್ಣ ಎಂಬವರ ಮನೆಗೆ ಹಾನಿಯಾಗಿದ್ದು, ಅದರ ನಷ್ಟದ ಕುರಿತು ಅಂದಾಜು ಪಟ್ಟಿ ತಯಾರಿಸಿ ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ತಡೆಗೋಡೆ ನಿರ್ಮಿಸುವ ಸಲುವಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ವಿಶೇಷ ಪ್ರಯತ್ನದ ಫಲವಾಗಿ ಎಡಿಬಿ ಯೋಜನೆಯಡಿ 90 ಕೋಟಿ ರೂಗಳ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಇದು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ಉಡುಪಿ ನಗರ ಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಮಾಜಿ ಸದಸ್ಯ ದಿವಾಕರ ಕುಂದರ್, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಯುವರಾಜ್, ಬಂದರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.