ಕುಮಾರಸ್ವಾಮಿ ಮಂಡಿಸಿದ್ದು ಐಸ್ ಕ್ಯಾಂಡಿ ಬಜೆಟ್- ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಐಸ್ ಕ್ಯಾಂಡಿ ಬಿಸಿಲಲ್ಲಿ ಇಟ್ಟಾಗ ತಕ್ಷಣ ಕರಗಿ ನೀರಾಗುವ ಹಾಗೆ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲದ ವ್ಯರ್ಥ ಬಜೆಟನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಡಿಸಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಪ್ರತಿ ವರ್ಷ ಬಜೆಟ್ ಮಂಡಿಸುವ ಮೊದಲು ಎಲ್ಲಾ ಶಾಸಕರಿಗೆ ಮತ್ತು ಮಾಧ್ಯಮದವರಿಗೆ ಬಜೆಟ್ ಪ್ರತಿ ಇರುವ ಪುಸ್ತಕವನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಸಿಎಂ ಈ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಮೂಲಕ ಎಪ್ಪತ್ತು ವರ್ಷಗಳ ಇತಿಹಾಸವನ್ನು ಮುರಿದಿದ್ದಾರೆ. ವಿಧಾನಸಭಾ ವಿಪಕ್ಷ ನಾಯಕರಾಗಿರುವ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಕಳೆದ ಎರಡು ದಿನಗಳಿಂದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಲಿಖಿತ ಪತ್ರ ಬರೆದು ಬಜೆಟ್ ಪುಸ್ತಕ ಮುಂಚಿತವಾಗಿ ನೀಡಲು ಸೂಚಿಸಬೇಕು ಎಂದು ವಿನಂತಿಸಿದ್ದರು. ಆದರೆ ಅದನ್ನು ಪಾಲಿಸದೇ ಕುಮಾರಸ್ವಾಮಿಯವರು ವಿಧಾನಸಭೆಯ ಗೌರವಕ್ಕೆ ದಕ್ಕೆ ತಂದಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಬಜೆಟ್ ಮಂಡನೆಯ ದಿನ ಬೆಳಿಗ್ಗೆ ಸಿಎಂ ಕುಮಾರಸ್ವಾಮಿಯವರು ಸುದ್ದಿಗೋಷ್ಟಿ ಮಾಡಿ ಸಿನೆಮಾ ಚಿತ್ರೀಕರಣದಂತೆ ಯಾರದ್ದೋ ಧ್ವನಿಯ ಸಿಡಿ ಮಾಡಿ, ಯಡಿಯೂರಪ್ಪನವರು ಆಡಳಿತ ಪಕ್ಷದ ಶಾಸಕರನ್ನು ಖರೀದಿಸಲು ಪ್ರಯತ್ನ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಬಜೆಟ್ ನಂತಹ ಗಂಭೀರ ವಿಷಯಗಳನ್ನು ಮಂಡಿಸುವ ದಿನ ಸುದ್ದಿಗೋಷ್ಟಿ ಮಾಡಿ ಸುಳ್ಳು ಕಥೆ ಕಟ್ಟಿರುವ ಕುಮಾರಸ್ವಾಮಿಯವರ ಹೇಳಿಕೆ ನಿರಾಧಾರವಾಗಿದೆ. ಇನ್ನು ಬಜೆಟ್ ಮಂಡಿಸುವ ವೇಳೆಯಲ್ಲಿ ಸ್ಪೀಕರ್ ಅವರನ್ನು ಸೇರಿಸಿ ಆಡಳಿತ ಪಕ್ಷದ 103 ಶಾಸಕರು ಮಾತ್ರ ಹಾಜರಿದ್ದರು. ಬಹುಮತ ಇಲ್ಲದೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಉಳಿದ ಶಾಸಕರು ಎಲ್ಲಿಗೆ ಹೋಗಿದ್ದಾರೆ ಎಂದು ತಿಳಿಸಲಿ ಎಂದು ಶಾಸಕ ಕಾಮತ್ ಪ್ರಶ್ನಿಸಿದ್ದಾರೆ.
ಬಜೆಟ್ ನಂತರ ಅದರ ಮೇಲೆ ಚರ್ಚೆಯಾಗಬೇಕು ಎಂದು ನಾವು ಬಯಸಿದ್ದೇವು. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ಕುಮಾರಸ್ವಾಮಿಯವರು ಭ್ರಷ್ಟಾಚಾರದ ಬೆರಳು ತೋರಿಸಿರುವುದು ದು:ಖಕರ. ಒಟ್ಟಾಗಿ ಬಜೆಟ್ ಮಂಡಿಸುವ ದಿನ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಅದನ್ನು ಖಂಡಿಸಿ ಮಾನ್ಯ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ವಿಧಾನಸೌಧದ ಹೊರಗೆ ಗಾಂಧಿಜಿಯವರ ಪ್ರತಿಮೆಯ ಬಳಿ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಿದೆ. ಕೇಂದ್ರ ಸರಕಾರದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೇಂದ್ರ ಬಜೆಟಿನಲ್ಲಿ ಮೀನುಗಾರರ ಅಭಿವೃದ್ಧಿಯ ಬಗ್ಗೆ ಚಿಂತಿಸಿ ಯೋಜನೆ ಅನುಷ್ಠಾನಗೊಳಿಸಿರುವಾಗ ರಾಜ್ಯ ಬಜೆಟಿನಲ್ಲಿ ಮೀನುಗಾರರನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿರಾಸೆಗೊಳಿಸಿದ್ದಾರೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.