ಕುಮಾರಸ್ವಾಮಿ, ಸಿದ್ಧರಾಮಯ್ಯ ವರ್ತನೆ ನಾಚಿಕೆಗೇಡು- ಶಾಸಕ ಕಾಮತ್

Spread the love

ಕುಮಾರಸ್ವಾಮಿ, ಸಿದ್ಧರಾಮಯ್ಯ ವರ್ತನೆ ನಾಚಿಕೆಗೇಡು- ಶಾಸಕ ಕಾಮತ್

ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜೀನಾಮೆಗೆ ಸಿದ್ಧ ಎಂದಿರುವುದು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಹಿರಂಗಸಭೆಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ನೋಡಿದ ಜನರಿಗೆ ಈ ಸರಕಾರದ ಅವಸ್ಥೆ ಕಂಡು ರೋಸಿಹೋಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ತಾವು ರಾಜೀನಾಮೆ ಕೊಡಲು ಸಿದ್ಧ ಎನ್ನುತ್ತಿರುವ ಕುಮಾರಸ್ವಾಮಿಯವರಿಗೆ ತಾವು ಹೀಗೆ ಪದೇ ಪದೇ ಹೇಳುವುದರಿಂದ ಸರಕಾರದ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಸರಕಾರ ಅಸ್ಥಿರವಾಗಿದೆ ಎನ್ನುವ ಭಾವನೆ ದಟ್ಟವಾಗುತ್ತಿದೆ ಎಂದು ತಿಳಿಯುವುದಿಲ್ಲವೇ. ಇದರಿಂದ ರಾಜ್ಯ ಸರಕಾರದ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಸಿಎಂ ರಾಜೀನಾಮೆಗೆ ಸಿದ್ಧ ಎನ್ನುವುದು ಅವರ ಮತ್ತು ಕಾಂಗ್ರೆಸ್ ಒಳಗಿನ ಆಂತರಿಕ ಗೊಂದಲ ಇರಬಹುದು. ಆದರೆ ಇದರಿಂದ ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ಕಾಮತ್ ಹೇಳಿದರು.

ಇನ್ನು ಮೈಸೂರಿನಲ್ಲಿ ಸಿದ್ಧರಾಮಯ್ಯನವರ ಮಗನ ಕ್ಷೇತ್ರವಾಗಿರುವ ವರುಣಾದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಮಹಿಳಾ ಮಾಜಿ ಜನಪ್ರತಿನಿಧಿಯೊಬ್ಬರು ಹೇಳಿದ್ದಕ್ಕೆ ಸಿದ್ಧರಾಮಯ್ಯ ಆ ಹೆಣ್ಣುಮಗಳ ಶಾಲು ಎಳೆದು ಆಧುನಿಕ ದುಶ್ಶಾಸನರಂತೆ ವರ್ತಿಸಿದ್ದಾರೆ. ಮನಬಂದಂತೆ ಮಹಿಳೆಗೆ ನಿಂದಿಸಿದ್ದಾರೆ. ತಮ್ಮ ಮಗನ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಕೋಪವನ್ನು ಸಿದ್ಧರಾಮಯ್ಯನವರು ಮಹಿಳೆಗೆ ಜೋರು ಮಾಡುವ ಮೂಲಕ ತೀರಿಸಿದ್ದಾರೆ. ಕಾಂಗ್ರೆಸ್ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದು ಈ ಘಟನೆಯಿಂದ ಬಯಲಿಗೆ ಬಂದಿದೆ.

ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಆಂತರಿಕ ಕಲಹ ತಾರಕಕ್ಕೇರಿದೆಯೇ ಹೊರತು ರಾಜ್ಯದ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಿಲ್ಲ ಎಂದು ಶಾಸಕ ಕಾಮತ್ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಅಭಿವೃದ್ಧಿಯ ಕುರಿತು ಪ್ರಶ್ನೆ ಮಾಡಿದ ಮಹಿಳೆಯೊಬ್ಬಳ ಸೆರಗಿಗೆ ಕೈ ಹಾಕುವ ಮೂಲಕ ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ಕೃತ್ಯವನ್ನು ಖಂಡಿಸುವ ಬದಲಿಗೆ ಸಿದ್ಧರಾಮಯ್ಯನವರ ಅವರ ಕೃತ್ಯವನ್ನು ಸಮರ್ಥಿಸುವ ಮೂಲಕ ಮಹಿಳೆಯ ಮೇಲೆ ಕೈ ಹಾಕುವುದು ಅಪರಾಧವಲ್ಲ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಖಂಡರನನ್ನು ಇಂತಹ ಕೃತ್ಯ ಎಸಗಲು ಪ್ರಚೋದಿಸುತ್ತಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಈ ವಿಚಾರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ಮುಖಂಡರು ಯಾಕೆ ಮೌನ ವಹಿಸಿದ್ದಾರೆ. ಮಹಿಳೆಯೊಬ್ಬರ ಮೇಲೆ ಅವರ ಪಕ್ಷದ ನಾಯಕರು ಕೈ ಮಾಡಿದ್ದರ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಕೂರುವುದಿಲ್ಲವೇಕೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.

ಸಂತಾಪ: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ, ಒಂಭತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿ ದೂರಸಂಪರ್ಕ, ರೈಲ್ವೆ, ಬೃಹತ್ ಕೈಗಾರಿಕೆಯಂತಹ ಇಲಾಖೆಗಳ ಸಚಿವರಾಗಿ, ಕರಾವಳಿಯ ಜೀವನಾಡಿ ಕೊಂಕಣ ರೈಲ್ವೆಯ ಪ್ರೇರಕ ಶಕ್ತಿಯಾಗಿದ್ದ ಮಂಗಳೂರಿನವರಾದ ಶ್ರೀ ಜಾರ್ಜ್ ಮ್ಯಾಥ್ಯು ಫೆರ್ನಾಂಡಿಸ್ ಅವರ ನಿಧನಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love