ಕುಳಾಯಿ ಮೀನುಗಾರಿಕಾ ಬಂದರು– ಸಿ.ಆರ್.ಝಡ್ ಅನುಮತಿಗೆ ಶಿಫಾರಸ್ಸು.

Spread the love

ಮ0ಗಳೂರು: ನವಮಂಗಳೂರು ಬಂದರು ಸ್ಥಾಪನೆಯ ಸಮಯದಲ್ಲಿ ನಿರ್ವಸಿತರಾದ ಮೀನುಗಾರರ ಬಹು ದಶಕಗಳ ಬೇಡಿಕೆಯಂತೆ ಕುಳಾಯಿ ಗ್ರಾಮದ ಸರ್ಕಾರಿ ಮಂಜುಗಡ್ಡೆ ಕಾರ್ಖಾನೆ ಬಳಿಯಲ್ಲಿ ಕುಳಾಯಿ, ಹೊಸಬೆಟ್ಟು ಗ್ರಾಮಗಳಲ್ಲಿ ರೂ.230 ಕೋಟಿ ಯೋಜನೆಯ ಬಹುನಿರೀಕ್ಷಿತ ಕುಳಾಯಿ ಮೀನುಗಾರಿಕಾ ಬಂದರು ಯೋಜನೆಯ ಬಗ್ಗೆ ಚರ್ಚಿಸಿ ಅನುಮೋದನೆಗಾಗಿ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಾಯಿತು.
ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ.
ಈ ಯೋಜನೆಯು ವರ್ಷಕ್ಕೆ 27,100 ಟನ್ ನಿರ್ವಹಣಾ ಸಾಮಥ್ರ್ಯದ ಮೀನುಗಾರಿಕಾ ಬಂದರಾಗಿದ್ದು, ಎನ್‍ಎಂಪಿಟಿ ವಾಣಿಜ್ಯ ಬಂದರಿನ ಸ್ಥಾಪನೆಯ ಸಮಯದಲ್ಲಿ ನಿರ್ವಸಿತರಾದ ಬೈಕಂಪಾಡಿ, ಕುಳಾಯಿ, ಚಿತ್ರಾಪುರ, ಹೊಸಬೆಟ್ಟು, ಕೂಳೂರು, ಪಣಂಬೂರು, ತಣ್ಣೀರುಬಾವಿ ಗ್ರಾಮಗಳ ಮೀನುಗಾರರ ಬಹುನಿರೀಕ್ಷಿತ ಮೀನುಗಾರಿಕಾ ದೋಣಿಗಳ ಸುಸಜ್ಜಿತ ತಂಗುವಿಕೆಗಾಗಿ ಪ್ರಸ್ತಾಪಿಸಲಾಗಿತ್ತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಳೆಗಾಲದಲ್ಲಿ ಭದ್ರತೆಯ ದೃಷ್ಟಿಯಿಂದ ವಾಣಿಜ್ಯ ಬಂದರನ್ನು ಪ್ರವೇಶಿಸುತ್ತಿದ್ದ ಮೋಟರೀಕೃತ ದೋಣಿಗಳಿಗೆ ಬದಲಿ ವ್ಯವಸ್ಥೆಗಾಗಿ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ ವಾಣಿಜ್ಯ ಬಂದರಿನ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಮೀನುಗಾರರ ದೋಣಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಈ ಯೋಜನೆಯು ಈಗಾಗಲೇ ಮಂಗಳೂರು, ಮಲ್ಪೆ ಮೀನುಗಾರಿಕಾ ಬಂದರುಗಳಲ್ಲಿನ ದೋಣಿಗಳ ದಟ್ಟಣಿಯನ್ನು ಕಡಿಮೆ ಮಾಡಿ ಸುಮಾರು 45 ಪರ್ಸೀನ್ ದೋಣಿಗಳು, 230 ಟ್ರಾಲ್ ದೋಣಿಗಳ (120 ಸಣ್ಣ ಟ್ರಾಲರ್‍ಗಳು, 110 ದೊಡ್ಡ ಟ್ರಾಲ್‍ಗಳಿವೆ) ತಂಗುವಿಕೆಗೆ ಅವಕಾಶ ಕಲ್ಪಿಸಿಕೊಡುತ್ತದೆ. ಅಲ್ಲದೆ ಮಳೆಗಾಲದ ಸಮಯದಲ್ಲಿ ವಾಣಿಜ್ಯ ಬಂದರು ಒಳಪ್ರವೇಶಿಸುತ್ತಿದ್ದ ಸುಮಾರು ಒಂದು ಸಾವಿರದಷ್ಟು ಮೋಟರೀಕೃತ, ಸಾಂಪ್ರದಾಯಿಕ ದೋಣಿಗಳ ತಂಗುವಿಕೆಗೆ ಅವಕಾಶ ಕಲ್ಪಿಸುತ್ತದೆ ಎಂದು ಅವರು ತಿಳಿಸಿದರು.
ಈಗಾಗಲೇ ಸುಮಾರು 50 ವರ್ಷಗಳಷ್ಟು ಈ ಯೋಜನೆ ವಿಳಂಭವಾಗಿದೆ. ಇದು ಇನ್ನಷ್ಟು ವಿಳಂಭವಾಗದೆ ಆದಷ್ಟು ಶೀಘ್ರವೇ ಕಾಮಗಾರಿ ಆರಂಭವಾಗಬೇಕಿದೆ. ಜಿಲ್ಲೆಯ ಮೀನುಗಾರಿಕಾ ಕ್ಷೇತ್ರದ ಪ್ರಗತಿಗೆ ಇದೊಂದು ದೊಡ್ಡ ಮೈಲುಗಲ್ಲಾಗಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಕೆ. ಗಣೇಶ್ ಮಾತನಾಡಿ, ಈ ಯೋಜನೆಯಲ್ಲಿ ಸಮುದ್ರ ನೀರಿಗೆ ಸಂಬಂಧಪಟ್ಟ ಸೌಲಭ್ಯಗಳು ಮತ್ತು ತೀರ ಪ್ರದೇಶದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಬ್ರೇಕ್ ವಾಟರ್ (ಪ್ರವಾಹ ತಡೆ ಸೌಲಭ್ಯಗಳು), ಕ್ವೇ, ಜೆಟ್ಟಿ ಸೌಲಭ್ಯ, ಹೂಳೆತ್ತುವುದು, ಭೂಸುಧಾರಣೆ (ರಿಕ್ಲೈಮೇಶನ್) (water front activities), ಹರಾಜು ಪ್ರಾಂಗಣ, ಮೀನು ಲೋಡಿಂಗ್, ಸಾಗಾಟ, ವಾಹನ ನಿಲುಗಡೆ ವ್ಯವಸ್ಥೆ, ನೀರು ಸರಬರಾಜು ವ್ಯವಸ್ಥೆ, ಮೀನುಗಾರಿಕೆ ಆಡಳಿತ ಕಚೇರಿ, ಕಾರ್ಮಿಕರ ವಿಶ್ರಾಂತಿ ಸ್ಥಳ, ಬಲೆ ನೇಯ್ಗೆ ಮತ್ತು ಒಣಗಿಸುವ ಶೆಡ್, ಬೋಟ್ ತಂಗುದಾಣ, ದುರಸ್ತಿಗೆ ವ್ಯವಸ್ಥೆ, ಇಂಧನ ತೈಲ ಪೂರೈಕೆ, ಶೇಖರಣೆ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ, ಒಳರಸ್ತೆಗಳು, ಮತ್ತಿತರ ಪೂರಕ ಸೌಲಭ್ಯ ಒಳಗೊಂಡಿದೆ ಎಂದರು.
ಈ ಯೋಜನೆಗೆ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯವು ಯೋಜನಾ ವೆಚ್ಚದ ಶೇ.40, ನವಮಂಗಳೂರು ಬಂದರು ಮಂಡಳಿಯು ಶೇ.30 ಮತ್ತು ಬಾಕಿ ಉಳಿದ ಶೇ.30ನ್ನು ಕೇಂದ್ರ ಸರ್ಕಾರದ ನೌಕಾ ಮಂತ್ರಾಲಯದ ‘ಸಾಗರಮಾಲಾ’ ಯೋಜನೆಯಡಿ ಭರಿಸಲಾಗುವುದು ಎಂದು ಅವರು ಹೇಳಿದರು.

ಈ ಯೋಜನೆ ಬಗ್ಗೆ ಈಗಾಗಲೇ ಪರಿಸರ ಸಾರ್ವಜನಿಕ ಅಹವಾಲು ಸಭೆ ನಡೆಸಿದ್ದು, ಈ ಸಭೆಯಲ್ಲಿ ಯೋಜನೆಯ ಅಗತ್ಯತೆ ಬಗ್ಗೆ ಎಲ್ಲಾ ಮೀನುಗಾರರು, ಸಾರ್ವಜನಿಕರು ಒತ್ತಾಯಿಸಿದ್ದಾರೆ. ಯೋಜನೆಯನ್ನು ಕರಾವಳಿ ನಿಯಂತ್ರಣ ಅಧಿಸೂಚನೆ 2011 ರಡಿ ಅನುಮೋದನೆಗಾಗಿ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಬಹುದು ಎಂದು ಅವರು ಹೇಳಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love