ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ಧುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಖಾಸಗಿಕರಣಕ್ಕೆ ಬೇಡ: ಡಾ| ಪಿ ವಿ ಭಂಡಾರಿ
ಉಡುಪಿಯ ಕೂಸಮ್ಮ ಶಂಬುಶೆಟ್ಟಿ ಹಾಜಿ ಅಬ್ಧುಲ್ಲಾ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸಿದ್ದರಾಮಯ್ಯ ಸರಕಾರದ ವಿರುದ್ದ ಹಾಜಿ ಅಬ್ಧುಲ್ಲಾ ಚಾರಿಟೇಬಲ್ ಟ್ರಸ್ಟ್ ಕಿಡಿಕಾರಿದೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟ್ ನ ಅದ್ಯಕ್ಷ ಪಿ.ವಿ ಭಂಡಾರಿ ಮಾತನಾಡಿ ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿರುವ ಸಂದರ್ಬದಲ್ಲಿ ಹಾಜಿ ಅಬ್ಧುಲ್ಲಾ ಅವರ ಜಾಗವನ್ನು ಪಿ.ಪಿ.ಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸಲು ಖಾಸಗಿಗೆ ಕೊಟ್ಟಿತು. ಆದರೆ ಆಸ್ಪತ್ರೆ ನಿರ್ಮಿಸಿದರೂ ಅದರ ನಿರ್ವಹಣೆ ಮಾಡಲು ಸಾದ್ಯವಾಗದೇ ಮತ್ತೆ ಸರಕಾರದ ಸುಪರ್ದಿಗೆ ಆಸ್ಪತ್ರೆ ಹೋಯಿತು. ಇದೀಗ ಮತ್ತೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಈಗ ಆಸ್ಪತ್ರೆಯನ್ನು ಖಾಸಗೀಯವರಿಗೆ ಒಪ್ಪಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು ಇದನ್ನು ನಾವು ವಿರೋಧ್ಗಿಸುತ್ತೇವೆ. ಪಿ.ಪಿ.ಪಿ ಮಾದರಿ ಕರ್ನಾಟಕದಲ್ಲಿ ಸಕ್ಸಸ್ ಆಗೋದಿಲ್ಲ ಆದ್ದರಿಂದ ಒಂದೇ ಸರಕಾರವೇ ಈ ಆಸ್ಪತ್ರೆಯನ್ನು ಮುನ್ನಡೆಸಿಕೊಂಡು ಹೋಗಬೇಕು ಅಂತ ಒತ್ತಾಯಿಸಿದರು, ಒಂದು ವೇಳೆ ಸರಕಾರ ಖಾಸಗಿಯವರಿಗೆ ನೀಡಲು ಮುಂದಾದರೆ ಕಾನೂನು ಹೋರಾಟವೂ ಸೇರಿದಂತೆ ಉಡುಪಿಯ ಸಾರ್ವಜನಿಕರೊಂದಿಗೆ ಸೇರಿ ರಸ್ತೆಗೆ ಇಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ
ಬಡವರ ಆಸ್ಪತ್ರೆ ಎಂದೇ ಕರೆಯಲಾಗುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿಯವರಿಗೆ ನೀಡುವುದನ್ನು ಹಾಜಿ ಅಬ್ದುಲ್ಲಾ ಟ್ರಸ್ಟ್ ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದರು.
ಉಡುಪಿಯ ಕೊಡುಗೈ ದಾನಿ ಎನಿಸಿದ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಇವರು ಸಮಾಜದ ಬಡವರು ಹಾಗೂ ಹಿಂದುಳಿದವರಿಗಾಗಿ ತಾನೇ ದಾನವಾಗಿತ್ತ ಜಾಗದಲ್ಲಿ ಕಟ್ಟಿದ ಆಸ್ಪತ್ರೆ. ದಾನಿಗಳ ಆಶಯದಂತೆ ಉತ್ತಮವಾಗಿ ನಡೆಯುತಿದ್ದ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಆಧುನೀಕರಿಸುವ ನೆಪದಲ್ಲಿ ಖಾಸಗಿಯವರಿಗೆ ಒಪ್ಪಿಸಿದಾಗ ಉಡುಪಿಯ ಜನತೆಯೊಂದಿಗೆ ಸೇರಿ ಟ್ರಸ್ಟ್ ಕಾನೂನಾತ್ಮಕ ಹೋರಾಟ ನಡೆಸಿತ್ತು. ಇದೀಗ ಡಾ.ಬಿ.ಆರ್.ಶೆಟ್ಟಿ ಅವರಿಗೆ ಆಸ್ಪತ್ರೆಯನ್ನು ನಡೆಸಲು ಸಾಧ್ಯವಾಗದೇ ಮತ್ತೆ ಅದು ಸರಕಾರದ ಸುಪರ್ದಿಗೆ ಬಂದಿದೆ ಎಂದು ಡಾ.ಭಂಡಾರಿ ವಿವರಿಸಿದರು.
200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಈಗ ಸಂಪೂರ್ಣವಾಗಿ ಸರಕಾರಿ ಆಸ್ಪತ್ರೆಯಾಗಿದ್ದು, ಇದನ್ನು ಸಮಾಜದ ಬಡವರ ಹಾಗೂ ದುರ್ಬಲ ವರ್ಗದವರಿಗೆ ಉಚಿತ ಸೇವೆ ನೀಡುವ ಆಸ್ಪತ್ರೆಯಾಗಿ ಉಳಿಸಿಕೊಳ್ಳಬೇಕು. ಆದರೆ ಈ ಹಿಂದಿನಂತೆ ಸಿದ್ಧರಾಮಯ್ಯ ಸರಕಾರ ಮತ್ತೆ ಪಿಪಿಪಿ ಹೆಸರಿನಲ್ಲಿ ಖಾಸಗಿಯವರಿಗೆ ನೀಡಲು ತೆರೆಮರೆಯಲ್ಲಿ ಹುನ್ನಾರ ನಡೆಸುತ್ತಿರುವ ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರ 160 ಕೋಟಿ ರೂ.ವೆಚ್ಚದಲ್ಲಿ ಈಗಾಗಲೇ ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು 250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಾಗಿ ಮೇಲ್ದರ್ಜೆ ಗೇರಿಸುತ್ತಿದೆ. ಇದರೊಂದಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 200 ಬೆಡ್ಗಳು ಸೇರಿ 450 ಹಾಸಿಗೆಗಳು ಲಭ್ಯವಿದ್ದು, ಜಿಲ್ಲೆಯಲ್ಲಿ ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಬೇಕಾದ ಮೂಲಭೂತ ಸೌಕರ್ಯ ದೊರಕಿದಂತಾಗುತ್ತದೆ. ಇದರಿಂದ ದುಬಾರಿಯಾಗಿರುವ ವೈದ್ಯಕೀಯ ಶಿಕ್ಷಣ ಜಿಲ್ಲೆಯ ಬಡ ಪ್ರತಿಭಾವಂತ ಮಕ್ಕಳಿಗೆ ಸರಕಾರಿ ಶುಲ್ಕದಲ್ಲಿ ದೊರೆಯಲು ಸಾಧ್ಯವಾಗಲಿದೆ ಎಂದು ಡಾ.ಭಂಡಾರಿ ತಿಳಿಸಿದರು.
ಜಿಲ್ಲೆಯಲ್ಲಿ ಲಭ್ಯವಿರುವ ಸೌಕರ್ಯಗಳನ್ನು ಬಳಸಿ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜಿನ ಬದಲು ಸರಕಾರಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಬೇಕು. ಇದರಿಂದ ಸರಕಾರ ಖಾಸಗಿಯವರಿಗೆ ಜನರ ತೆರಿಗೆ ಹಣ ವ್ಯರ್ಥ ಮಾಡುವ ಬದಲು ಸರಕಾರಿ ಆಸ್ಪತ್ರೆಯಲ್ಲಿಯೇ ಅವಕಾಶ ವಂಚಿತ ಬಡವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯವನ್ನು ಉಚಿತವಾಗಿ ನೀಡಲು ಸಾಧ್ಯವಾಗುತ್ತದೆ ಎಂದರು.
ಹೀಗಾಗಿ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರ ಮತ್ತೊಮ್ಮೆ ಖಾಸಗಿಯವರಿಗೆ ನೀಡುವ ನಿರ್ಧಾರ ಮಾಡಿದಲ್ಲಿ ಅದನ್ನು ಕಾನೂನತ್ಮಕವಾಗಿ ಪ್ರಶ್ನಿಸುವುದಲ್ಲದೇ, ಜಿಲ್ಲೆಯ ಜನರೊಂದಿಗೆ ರಸ್ತೆಗಿಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಉಪಾಧ್ಯಕ್ಷರಾದ ಸಿರಾಜ್ ಅಹ್ಮದ್, ಪ್ರೊ.ಮುರಳೀಧರ ಉಪಾದ್ಯ ಹಿರಿಯಡ್ಕ, ಕಾರ್ಯದರ್ಶಿ ಯೋಗೇಶ್ ಸೇಠ್, ಖಜಾಂಚಿ ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು.