ಕೃಷ್ಣ ಮೃಗದ ಚರ್ಮದ ಬೃಹತ್ ಮಾರಾಟ ದಂಧೆ – ಆರು ಮಂದಿಯ ಬಂಧನ
ಮಂಗಳೂರು: ಕೃಷ್ಣ ಮೃಗದ ಚರ್ಮದ ಬೃಹತ್ ಮಾರಾಟ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಆರು ಮಂದಿಯ ತಂಡವೊಂದನ್ನು ಬಂಧಿಸಿರುವ ಅರಣ್ಯ ಸಂಚಾರಿ ದಳವು ಅಪಾರ ಪ್ರಮಾಣದ ಸೊತ್ತನ್ನು ವಶಕ್ಕೆ ಪಡೆದಿದೆ.
ಬಂಧಿತರನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿಹಾಳ ನಿವಾಸಿಗಳಾದ ತುಗ್ಲೆಪ್ಪ ಮಾಳಿ (37), ಶರಣಪ್ಪ ಅಮರಪ್ಪ ಚವ್ಹಾಣ (30), ಮಲ್ಲಯ್ಯ ಹಿರೇಮಠ (30), ಶಿವಯ್ಯ ಹಿರೇಮಠ (34), ಸಂಗಪ್ಪ ಕಟ್ಟಿಮನಿ (34), ಹನುಮಂತ ಕಟ್ಟಿಮನಿ (35) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮಂಗಳೂರಿನಿಂದ ಕೊಪ್ಪಳ ಜಿಲ್ಲೆಗೆ ತೆರಳಿ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತ ಆರೋಪಿಗಳಿಂದ 20 ಕೃಷ್ಣ ಮೃಗದ ಚರ್ಮಗಳು, ಎರಡು ಕೃಷ್ಣಮೃಗದ ಕೊಂಬುಗಳು, ಒಂದು ಜೀವಂತ ಕೃಷ್ಣಮೃಗದ ಮರಿ, ಮೂರು ದ್ವಿಚಕ್ರ ವಾಹನ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕ್ರಮಕ್ಕಾಗಿ ಕೊಪ್ಪಳ ವಲಯ ಅರಣ್ಯ ಅಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಮಂಗಳೂರು ಅರಣ್ಯ ಸಂಚಾರಿ ದಳದ ಪಿಎಸ್ಸೈ ಪುರುಷೋತ್ತಮ ತಿಳಿಸಿದ್ದಾರೆ.