ಕೆ.ಎಂ.ಸಿ ಆಸ್ಪತ್ರೆ ಅತ್ತಾವರದಲ್ಲಿ ಉಚಿತ ಸೋರಿಯಾಸಿಸ್ ತಪಾಸಣಾ ಶಿಬಿರ
ಮಂಗಳೂರು: ಸೋರಿಯಾಸಿಸ್ ಎಂಬುದು ಮೈಮೇಲೆ ಚರ್ಮದ ಜೀವಕೋಶಗಳು ಒಂದೇ ಸಮನೆ ಹೆಚ್ಚಿ, ಪದರು ಪದರಾಗಿ ದಡಿಕೆ ನಿಂತಂತೆ ಕಾಣುವ ದೀರ್ಘ ಕಾಲದ ಚರ್ಮದ ಉರಿಯೂತ. ಈ ವ್ಯಾಧಿಯು ಚರ್ಮದ ಮೇಲೆ ಚಿಕ್ಕ ಕಲೆಯಂತೆ ಕಾಣಿಸಿಕೊಳ್ಳಬಹುದು. ಇದು ಸಾಂಕ್ರಾಮಿಕ ರೋಗವಲ್ಲ. ರೋಗ ನಿರೋಧಕ ಶಕ್ತಿಯ ಏರುಪೇರಿನಿಂದ ಬರುವ ರೋಗ. ಕೆಲವೊಮ್ಮೆ ಇದು ಅನುವಂಶಿಕ ಕಾಯಿಲೆಯಾಗಿಯೂ ಬರಬಹುದು. ಆದರೆ ಯಾವುದೇ ಅಲರ್ಜಿ, ಅಂಟುರೋಗ ಅಥವಾ ಪೋಷಕಾಂಶಗಳ ಕೊರತೆಯಿಂದ ಬರುವ ರೋಗವಲ್ಲ. ಪ್ರಾರಂಭದಲ್ಲಿ ಚರ್ಮದಲ್ಲಿ ಕೆಂಪು ಬಣ್ಣದ ಊತದಿಂದ ತೊಡಗಿ ಮೆಲ್ಲನೆ ಬೆಳೆಯುತ್ತಾ ಚರ್ಮದ ಪದರು ಕಳಚತೊಡಗುತ್ತದೆ. ಬಿಳಿಯ ಪುಡಿ ಚರ್ಮದಿಂದ ಉದುರಲಾರಂಭಿಸುತ್ತದೆ. ಈ ಪದರವನ್ನು ಚರ್ಮದಿಂದ ಬೇರ್ಪಡಿಸಿದಾಗ ಚರ್ಮದ ರಕ್ತನಾಳಗಳು ಒಡೆದು ಕೆಂಪು ಸ್ರಾವವಾಗುತ್ತದೆ. ಮೊಣಕೈ, ಕಾಲಿನ ಮೊಣಗಂಟು, ಕೈ, ಕಾಲು, ತಲೆಯ ನೆತ್ತಿ, ಉಗುರು, ಸೊಂಟದ ಹಿಂಬದಿ ಇವು ಸಾಮಾನ್ಯವಾಗಿ ಈ ರೋಗ ಕಾಣಬರುವಂಥ ಭಾಗಗಳು. ಕೈಕಾಲಿನ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿ ಸಡಿಲವಾಗಿ ಕಿತ್ತು ಹೋಗಬಹುದು.
ವಿಶ್ವ ಸೋರಿಯಾಸಿಸ್ ದಿನದ ಅಂಗವಾಗಿ ಆಕ್ಟೋಬರ್ 26 ರಿಂದ ಆಕ್ಟೋಬರ್ 31 (ರವಿವಾರ ಹೊರತುಪಡಿಸಿ) ಸಮಯ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಅತ್ತಾವರದ ಕೆ.ಎಂ.ಸಿ ಆಸ್ಪತ್ರೆಯ ಚರ್ಮರೋಗ ಚಿಕಿತ್ಸಾ ವಿಭಾಗದಲ್ಲಿ ಉಚಿತ ಸೋರಿಯಾಸಿಸ್ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಚರ್ಮರೋಗ ತಜ್ಞರು ಉಚಿತವಾಗಿ ತಪಾಸಣೆಯನ್ನು ನಡೆಸಲಿದ್ದಾರೆ. ರೋಗಿಗಳಿಗೆ ಅಗತ್ಯವಿದ್ದಲ್ಲಿ ಶೇ.25% ರಿಯಾಯಿತಿ ದರದಲ್ಲಿ ಫೋಟೋಥೆರಪಿ ಹಾಗೂ ಶೇ.10% ರಿಯಾಯಿತಿ ದರದಲ್ಲಿ ರೇಡಿಯಾಲಜಿ/ಎಕ್ಸ್ರೇ ಪರೀಕ್ಷೆಗಳನ್ನು ನಡೆಸಲಾಗುವುದು. ಸೋರಿಯಾಸಿಸ್ ಕಾಯಿಲೆಯ ಬಗ್ಗೆ ಸಂಶಯವಿದ್ದವರು, ಧೀರ್ಘಕಾಲದ ಚರ್ಮರೋಗಗಳಿಂದ ಬಳಲುತ್ತಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದು ಎಂದು ಕೆ.ಎಂ.ಸಿ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಆನಂದ್ ವೇಣುಗೋಪಾಲ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.