ಕೆ.ಎಸ್. ಆರ್.ಟಿ.ಸಿ ಬಸ್ಸಿನ ಸೇವೆಗೆ ಜಿಪಂ ಸದಸ್ಯರಿಂದ ವ್ಯಾಪಕ ಪ್ರಶಂಸೆ
ಉಡುಪಿ : ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ಸೇವೆ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಜಿಲ್ಲಾ ಪಂಚಾಯತ್ ಸದಸ್ಯರಿಂದ ಪ್ರಶಂಸೆ ವ್ಯಕ್ತವಾಯಿತು; ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಇನ್ನಷ್ಟು ಪರ್ಮಿಟ್ ನೀಡುವಂತೆ ಸಭೆಯಲ್ಲಿ ಸದಸ್ಯರಿಂದ ಬೇಡಿಕೆ ಬಂತು. ಪೀಕ್ ಅವರ್ಸ್ ನಲ್ಲಿ ಇನ್ನಷ್ಟು ಬಸ್ ಓಡಿಸುವಂತೆಯೂ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್‍ನ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾದ 7ನೇ ಸಾಮಾನ್ಯ ಸಭೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರೇಷ್ಮಾ ಉದಯಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬುಶೆಟ್ಟಿ, ಗೌರಿ ದೇವಾಡಿಗ, ಜನಾರ್ದನ ತೋನ್ಸೆ, ಶೋಭಾ ಜಿ. ಪುತ್ರನ್ ಅವರು ಸೇವೆಯನ್ನು ಇನ್ನಷ್ಟು ಉತ್ತಮವಾಗಿ ನೀಡುವ ಬಗ್ಗೆ ಸಲಹೆಗಳನ್ನು ನೀಡಿದರಲ್ಲದೆ, ಕುಂದು ಕೊರತೆ ನಿವಾರಿಸಲು ಮನವಿ ಮಾಡಿದರು.
ಉಡುಪಿ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಬಸ್‍ಗಳ ಸೇವೆ ಕೆ ಎಸ್ ಆರ್ ಟಿ ಸಿ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಇನ್ನಷ್ಟು ದೊರೆಯಲಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಬಸವ ವಸತಿಯೋಜನೆ ಅನುಷ್ಠಾನದಲ್ಲಿ ಆಗಾಗ ಆಗುತ್ತಿರುವ ಬದಲಾವಣೆಗಳಿಂದ ವಸತಿ ಯೋಜನೆ ಫಲಾನುಭವಿಗಳಿಗೆ ತೊಂದರೆಯಾಗಿದೆ ಎಂದು ಜನಾರ್ಧನ ತೋನ್ಸೆ ಅವರು ಸಭೆಯ ಗಮನಸೆಳೆದಾಗ ಈಗಿರುವ 1.5 ಮತ್ತು 1.6 ವರ್ಷನ್ ನಡಿ ಜಿಪಿಎಸ್ ಮೂಲಕ ದಾಖಲಿಸಲು ವಸತಿ ನಿಗಮದಿಂದ ಸೂಚನೆ ಬಂದಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
ಪಂಚಾಯಿತಿ ತೆರಿಗೆ ವಸೂಲಾತಿ ಹಾಗೂ ಉಪಯೋಗದ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪ್ರಶ್ನಿಸಿದರು. ಪ್ರಸಕ್ತ ಸಾಲಿನಲ್ಲಿ ತೆರಿಗೆ ಪರಿಷ್ಕರಿಸಿ ಬಂದಿರುವ ಆದೇಶದ ಬಗ್ಗೆ ಸಿಪಿಒ ಮಾಹಿತಿ ನೀಡಿದರು.
ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಯ ಬಗ್ಗೆಯೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಕಿಂಡಿ ಅಣೆಕಟ್ಟು ದುರಸ್ತಿ, ಕಳಪೆ ಕಾಮಗಾರಿಯ ಬಗ್ಗೆ ನಡೆದ ಚರ್ಚೆಯಲ್ಲಿ ಕೊಕ್ಕರ್ಣೆ ವ್ಯಾಪ್ತಿಯ ಕಿಂಡಿ ಅಣೆಕಟ್ಟು ಕಾಮಗಾರಿ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶಿಸಿದರು.
ವಾರಾಹಿ ಯೋಜನೆಯಡಿ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಬಗ್ಗೆಯೂ ಸೂಕ್ತ ಕ್ರಮವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ನಿರ್ಲಕ್ಷ್ಯ ಸಲ್ಲದು ಎಂದರು. ಪ್ರತಾಪ್‍ಚಂದ್ರ ಶೆಟ್ಟಿ ಅವರು ಮಾತನಾಡಿ, ವಾರಾಹಿ ಯೋಜನಾನುಷ್ಟಾನ ಸಮರ್ಪಕವಾಗಿಸಿ ಎಂದು ಅಭಿಪ್ರಾಯ ಮಂಡಿಸಿದರು.
ಕಾಡು ಪ್ರಾಣಿಗಳ ಕಿರುಕುಳ, ಪರಿಹಾರದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿ, ಕಾಡುಪ್ರಾಣಿಗಳ ಹಾವಳಿಗೆ ಪರಿಹಾರ ನೀಡಲು ಅರಣ್ಯ ಇಲಾಖೆಯನ್ನು ಸಂಪರ್ಕಿಸಲು ಅವಕಾಶವಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಶಿಥಿಲಾವಸ್ತೆಯಲ್ಲಿರುವ 11 ಶಾಲೆಗಳನ್ನು ಗುರುತಿಸಿ ಪಟ್ಟಿಯನ್ನು ಅಂದಾಜುಪಟ್ಟಿ ತಯಾರಿಸಲು ನೀಡಲಾಗಿದೆ ಎಂದು ವಿದ್ಯಾಂಗ ಉಪನಿರ್ದೇಶಕರು ಮಾಹಿತಿ ನೀಡಿದರು. ಗೋಪಾಡಿ ಎ ಎನ್ ಎಂ ಸಮಸ್ಯೆ, ಕುಂದಾಪುರ ಆಸ್ಪತ್ರೆಯ ಸಮಸ್ಯೆಗಳು ಸಭೆಯಲ್ಲಿಂದು ವಿಸ್ತøತ ಚರ್ಚೆಗೆ ಒಳಗಾಯಿತು.
ಐಐಟಿಯಲ್ಲಿ 1148 ರ್ಯಾಂಕ್ ಪಡೆದ ಜಿಲ್ಲೆಯ ಕೊರಗ ಸಮುದಾಯದ ಪ್ರಥಮ ವಿದ್ಯಾರ್ಥಿನಿ ಸಾಕ್ಷಿಗೆ ಸನ್ಮಾನ ಮಾಡಲಾಯಿತು. ಇದರೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷರಾದ ಶೀಲಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಎಸ್ ಕೋಟ್ಯಾನ್, ಶಶಿಕಾಂತ್ ಪಡುಬಿದ್ರೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಭೆಯಲ್ಲಿ ಪಾಲ್ಗೊಂಡರು.