ಕೆಎಂಸಿ ಆಸ್ಪತ್ರೆ ಅತ್ತಾವರದ ಮೊದಲ ಕೋವಿಡ್-19 (ಕೊರೊನಾ) ಪಾಸಿಟಿವ್ ರೋಗಿ ಗುಣಮುಖವಾಗಿ ಬಿಡುಗಡೆ

Spread the love

ಕೆಎಂಸಿ ಆಸ್ಪತ್ರೆ ಅತ್ತಾವರದ ಮೊದಲ ಕೋವಿಡ್-19 (ಕೊರೊನಾ) ಪಾಸಿಟಿವ್ ರೋಗಿ ಗುಣಮುಖವಾಗಿ ಬಿಡುಗಡೆ

ಮಂಗಳೂರು: ಇತ್ತೀಚಿಗೆ ಅಂತರಾಷ್ಟ್ರೀಯ ಪ್ರಯಾಣದ ಇತಿಹಾಸವನ್ನು ಹೊಂದಿದ್ದ ಹಾಗೂ ಮಧುಮೇಹದಿಂದ ಬಳಲುತ್ತಿರುವ 70 ವರ್ಷದ ಮಹಿಳೆಯನ್ನು ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳ ದೂರುಗಳೊಂದಿಗೆ ದಾಖಲಿಸಲಾಗಿತ್ತು.

ರೋಗಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದಾಗಿ ಕಂಡು ಬಂದಿತ್ತು. ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಮೀಸಲಾದ ವಿಶೇಷ ಫ಼್ಲೂ ಚಿಕಿತ್ಸಾ ತಂಡದವರಿಂದ 14 ದಿನಗಳ ಕಾಲ ಚಿಕಿತ್ಸೆಯನ್ನು ನೀಡಲಾಯಿತು.

ರೋಗಿಯ ಪುನರಾವರ್ತಿತ ಕೋವಿಡ್-19 ಪರೀಕ್ಷೆಯು ನೆಗೆಟಿವ್ ಆಗಿದ್ದರಿಂದ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಹಾಗೂ ಸರಕಾರದ ಮಾರ್ಗಸೂಚಿಗಳ ಪ್ರಕಾರ ಅವರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿರುತ್ತಾರೆ.

ರೋಗಿ ಹಾಗೂ ರೋಗಿಯ ಸಂಬಂಧಿಕರು ಆಸ್ಪತ್ರೆಯಲ್ಲಿ ತಂಗಿದ್ದಾಗ ನೀಡಿದ ವಿಶೇಷ ಆರೈಕೆ ಮತ್ತು ಚಿಕಿತ್ಸೆಗಾಗಿ ವೈದ್ಯರಿಗೆ, ದಾದಿಯರಿಗೆ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅರ್ಪಿಸಿರುತ್ತಾರೆ.

ಕೆಎಂಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕರು, ಕೆಎಂಸಿ ಆಸ್ಪತ್ರೆಯ ಮಂಗಳೂರಿನ ಕೋವಿಡ್-19 ಫ಼್ಲೂ ತಂಡವು ಸರ್ಕಾರದ ಮಾರ್ಗಸೂಚಿಯ ಪ್ರಕಾರ ರೋಗಿಗೆ ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಮಾನದಂಡಗಳೊಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.


Spread the love