ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಸ್ವ-ಉದ್ಯೋಗ ಪ್ರೇರಣೆ ಮತ್ತು ಮಾಹಿತಿ ಶಿಬಿರ
ಉಡುಪಿ: ಹುಟ್ಟೂರಿನಲ್ಲಿ ಸ್ವ ಉದ್ಯೋಗ ಮಾಡುವುದರೊಂದಿಗೆ ಇತರರಿಗೆ ಕೂಡ ಉದ್ಯೋಗ ನೀಡಿ ಸೇವೆ ಸಲ್ಲಿಸಿದಾಗ ಸಿಗುವ ಸಾಮಾಜಿಕ ಗೌರವ ಎಲ್ಲಕ್ಕಿಂತಲೂ ಮಿಗಿಲಾದುದು ಎಂದು ಅಬಿದೀಪ್ ಗ್ರೂಪ್ ಮಣಿಪಾಲ ಇದರ ಆಡಳಿತ ನಿರ್ದೇಶಕರಾದ ವಿನ್ಸೆಂಟ್ ಪಿಂಟೊ ಅಭಿಪ್ರಾಯ ಪಟ್ಟರು.
ಅವರು ಭಾನುವಾರ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ಇದರ ವತಿಯಿಂದ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವ-ಉದ್ಯೋಗ ಪ್ರೇರಣೆ ಮತ್ತು ಮಾಹಿತಿ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕ್ರೈಸ್ತ ಸಮುದಾಯ ಯುವಕರು ಶಿಕ್ಷಣ ಮುಗಿಸಿದ ಕೂಡಲೇ ಉದ್ಯೋಗ ಅರಸಿ ವಿದೇಶಕ್ಕೆ ಹಾರುವುದು ಸಾಮಾನ್ಯ ಅದರ ಬದಲು ಊರಿನಲ್ಲಿ ಸ್ವ ಉದ್ಯೋಗವನ್ನು ಮಾಡಿ ತಮ್ಮ ಜೊತೆಯಲ್ಲಿ ಇತರರಿಗೆ ಉದ್ಯೋಗ ನೀಡುವುದರೊಂದಿಗೆ ಸಮಾಜಕ್ಕೆ ಮಾದರಿಯಾಗುವಂತಾಗಬೇಕು ಈ ನಿಟ್ಟಿನಲ್ಲಿ ಹೆತ್ತವರು ಕೂಡ ತಮ್ಮ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕು ಎಂದರು.
ಸಿಡೋಕ್ ಸಂಸ್ಥೆ ಉಡುಪಿ ಜಿಲ್ಲೆ ಇದರ ವ್ಯವಸ್ಥಾಪಕರಾದ ಪ್ರಥ್ವಿರಾಜ್ ಮತ್ತು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರ ಇದರ ಕೈಗಾರಿಕಾ ವಿಸ್ತರಣಾಧಿಕಾರಿಗಳಾದ ಸತೀಶ್ ಅವರು ಸ್ವಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಕೆಥೊಲಿಕ್ ಸಭಾ ನಿಯೋಜಿತ ಅಧ್ಯಕ್ಷ ರಾಬರ್ಟ್ ಮಿನೇಜಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಉದ್ಯಾವರ ಚರ್ಚಿನ ಲಾರೆನ್ಸ್ ಡೆಸಾ ಕೆಥೊಲಿಕ್ ಸಭಾ ಉಡುಪಿ ವಲಯ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ ಹಾಗೂ ಇತರರು ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಸ್ವ-ಉದ್ಯೋಗ ಮಾರ್ಗದರ್ಶನ ಸಮಿತಿ ಸಂಚಾಲಕರಾದ ಡಾ|ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು