ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ನೆರೆ ಸಂತ್ರಸ್ತರಿಗೆ ರೂ 40 ಲಕ್ಷ ಮೌಲ್ಯದ ನೆರವು

Spread the love

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ನೆರೆ ಸಂತ್ರಸ್ತರಿಗೆ ರೂ 40 ಲಕ್ಷ ಮೌಲ್ಯದ ನೆರವು

ಉಡುಪಿ: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಅವರ ನೆರವಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ರೂ 40 ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಗುರುವಾರ ವಿವಿಧ ಪ್ರದೇಶಗಳಿಗೆ ಕಳುಹಿಸಲಾಯಿತು.

ಉಡುಪಿ ವಲಯ ಪ್ರಧಾನ ಧರ್ಮಗುರು ಹಾಗೂ ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ ಅವರು ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಲಾರಿಗಳಿಗೆ ಉಡುಪಿ ಚರ್ಚಿನ ಬಳಿ ಹಸಿರು ನಿಶಾನೆ ತೋರಿದರು.

ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಿಂದ ಸಂತ್ರಸ್ಥರ ಅಗತ್ಯ ಬಳಕೆಗೆ ಬೇಕಾದ ಬಟ್ಟೆ, ನೀರು, ಅಕ್ಕಿ, ದಿನೋಪಯೋಗಿ, ವಸ್ತುಗಳು, ಔಷಧಿ, ಹಿಟ್ಟು, ಬೇಳೆ, ಬಿಸ್ಕತ್, ಚಾಪೆ, ಅಡುಗೆ ಎಣ್ಣೆ, ನೀರಿನ ಬಾಟೆಲ್, ಸೋಪು, ಚಹಾ ಪುಡಿ ಸೇರಿ ರೂ. 40 ಲಕ್ಷ ಮೌಲ್ಯದ ನೆರವು ನೀಡಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಐದು ವಲಯಗಳಾದ ಉಡುಪಿ, ಶಿರ್ವ, ಕಾರ್ಕಳ, ಕುಂದಾಪುರ ಮತ್ತು ಕಲ್ಯಾಣಪುರ ವಲಯದ ಕೆಥೊಲಿಕ್ ಸಭಾ ಘಟಕಗಳು ವಸ್ತುಗಳ ಸಂಗ್ರಹಕ್ಕೆ ಸಹಕಾರ ನೀಡಿದ್ದಾರೆ.

ಸಂಗ್ರಹಿಸಿದ ವಸ್ತುಗಳನ್ನು ಕಾರವಾರ, ಶಿವಮೊಗ್ಗ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳಿಗೆ ಸ್ವತಃ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಪ್ರತಿನಿಧಿಗಳ ತೆರಳಿ ನೆರೆಪೀಡಿತ ಸಂತ್ರಸ್ತರಿಗೆ ಹಸ್ತಾಂತರಿಸಲಿದ್ದಾರೆ.

ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ವಂ|ರೋಮಿಯೊ ಲೂವಿಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಆಲ್ಫೋನ್ಸ್ ಡಿಕೋಸ್ತಾ, ಪದಾಧಿಕಾರಿಗಳಾದ ಗ್ರೆಗೋರಿ ಪಿಕೆ ಡಿಸೋಜಾ, ಲೂಯಿಸ್ ಡಿಸೋಜಾ, ರೊನಾಲ್ಡ್ ಡಿ ಆಲ್ಮೇಡಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love