ಕೇಂದ್ರ ಸರಕಾರ ಅವಾಸ್ ಯೋಜನೆಗೆ ಫಲಾನುಭವಿಯ ಅರ್ಹತೆಯ ಕುರಿತು ಅಗತ್ಯವಾದ ಮಾಹಿತಿ ನೀಡಲಿ ದಕ ಯುವ ಜೆಡಿಎಸ್

Spread the love

ಕೇಂದ್ರ ಸರಕಾರ ಅವಾಸ್ ಯೋಜನೆಗೆ ಫಲಾನುಭವಿಯ ಅರ್ಹತೆಯ ಕುರಿತು ಅಗತ್ಯವಾದ ಮಾಹಿತಿ ನೀಡಲಿ ದಕ ಯುವ ಜೆಡಿಎಸ್

ಮಂಗಳೂರು: ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕುರಿತು ಹಾಗೂ ಜನರಿಗೆ ಸರಿಯಾದ ಮಾಹಿತಿಯನ್ನು ನೀಡದೆ ಜನರನ್ನು ಸತಾಯಿಸುತ್ತಿದ್ದು ಇದರಿಂದ ಬಡ ಜನರು ಸಂಕಷ್ಟಗೊಳಗಾಗಿದ್ದಾರೆ. ಬಡಜನರ ನೋವಿಗೆ ಬ್ಯಾಂಕ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದರು.

ಅವರು ಶುಕ್ರವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಬಡ ಜನರು ಸರಕಾರಿ ಯೋಜನೆಗಳು ಮೂಲಕ ಬ್ಯಾಂಕ್ ಸಾಲ ಪಡೆಯಲು ಹೋದಲ್ಲಿ ಬ್ಯಾಂಕ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ. ಇತ್ತೀಚೆಗೆ ತಾವು ಮಹಿಳೆಯೊಬ್ಬರಿಂದ ಅಂತಹುದೇ ಒಂದು ದೂರನ್ನು ಸ್ವೀಕರಿಸಿದ್ದು, ಆ ಮಹಿಳೆ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು, ಕಳೆದ ಮೂರು ತಿಂಗಳಿನಿಂದ ಕಂಬಗಳಿಂದ ಕಂಬಗಳಿಗೆ ಸುತ್ತಿ ಸಹಾಯ ಸಹಕಾರ ಯಾಚಿಸುತ್ತಿದ್ದರೂ ಕೂಡ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬಂದಿಗಳು ಬಡ ಹೆಣ್ಣು ಮಗಳಿಗೆ ಸೂಕ್ತ ರೀತಿಯ ಸಹಕಾರ ನೀಡುತ್ತಿಲ್ಲ. ಬಳಿಕ ಆ ಹೆಣ್ಣು ಮಗಳು ಸಹಾಯಕ್ಕಾಗಿ ತಮ್ಮನ್ನು ಅಂಗಲಾಚಿದ ಪರಿಣಾಮ ನಾವು ಬ್ಯಾಂಕಿಗೆ ತೆರಳಿ ಮಾಹಿತಿ ಕೇಳಿದಾಗ ಆ ಮಹಿಳೆಗೆ ಯೋಜನೆಯ ಫಲಾನುಭವಿಯಾಗಲು ಬೇಕಾದ ಅರ್ಹತೆಗಳಿಲ್ಲ ಎಂದು ಉತ್ತರಿಸಿದ್ದಾರೆ ಎಂದರು.

ಮುಂದುವರೆದು ಮಾತನಾಡಿದ ಅಕ್ಷಿತ್ ಸುವರ್ಣ ಒಂದು ವೇಳೆ ಆ ಮಹಿಳೆಗೆ ಅವಾಸ್ ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಇಲ್ಲವಾದಲ್ಲಿ ಯಾವ ಉದ್ದೇಶದಿಂದ ಸತತ ಮೂರು ತಿಂಗಳು ಬ್ಯಾಂಕ್ ಅಧಿಕಾರಿಗಳು ಸತಾಯಿಸಬೇಕಾಗಿತ್ತು ಎಂದು ಪ್ರಶ್ನಿಸಿದರು. ಹಾಗಾದರೆ ಅವರಿಗೆ ಅವರು ಬ್ಯಾಂಕ್ ಕೆಲಸದಲ್ಲಿ ಪರಿಣತಿ ಹೊಂದಿಲ್ಲವೇ, ಕೇಂದ್ರ ಸರಕಾರ ಯಾಕೆ ಆವಾಸ್ ಯೋಜನೆಯ ಅರ್ಹತೆಯ ಮಾಹಿತಿಯನ್ನು ಸಾಮಾನ್ಯ ಜನರಿಗೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಸರಕಾರಗಳು ಹಲವಾರು ಯೋಜನೆಗಳನ್ನು ಬಡವರ ಪರವಾಗಿ ಘೋಷಣೆ ಮಾಡುತ್ತವೆ ಆದರೆ ಅದಕ್ಕೆ ಬೇಕಾದ ಸೂಕ್ತ ಅರ್ಹತೆಯ ಬಗ್ಗೆ ಮಾತ್ರ ತಿಳಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸರಕಾರಿ ಯೋಜನೆಗಳ ಕುರಿತು ಮಾಹಿತಿ ನೀಡುವ ಮತ್ತು ಸಹಕಾರ ನೀಡುವ ನಿಟ್ಟಿನಲ್ಲಿ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಒಂದು ತಂಡ ಕಾರ್ಯನಿರ್ವಹಿಸಲಿದೆ ಎಂದು ಸುವರ್ಣ ತಿಳಿಸಿದರು.

ಇತ್ತೀಚೆಗೆ ಸುರಿದ ಭಾರಿ ಮಳೆಯ ಪರಿಣಾಮ ನಗರದ ರಸ್ತೆಗಳಲ್ಲಿ ನೀರು ತುಂಬಿ ಪ್ರಯಾಣಿಕರಿಗೆ ಸಮಸ್ಯೆಯನ್ನು ತಂದೊಡ್ಡಿದ ಘಟನೆಯ ಕುರಿತು ಪ್ರಸ್ತಾಪಿಸಿದ ಅಕ್ಷಿತ್ ಸುವರ್ಣ ಅವರು ಕೇವಲ ಒಂದು ಮಳೆಯ ಪರಿಣಾಮದಿಂದ ನಗರದ ಜನತೆ ಇಂತಹ ಸಮಸ್ಯೆಯನ್ನು ಎದುರಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನುವ ಮುನ್ಸೂಚನೆಯಾಗಿದೆ. ಅಸಮರ್ಪಕ ರಸ್ತೆ ಕಾಮಾಗಾರಿಯ ಪರಿಣಾಮ ರಸ್ತೆಯ ನೀರು ಸೂಕ್ತವಾಗಿ ಚರಂಡಿಯಲ್ಲಿ ಹರಿಯದೆ ಕೃತಕ ನೆರೆ ಸೃಷ್ಟಿಯಾಗಿ ನಗರದಲ್ಲಿ ಇಂತಹ ಸಮಸ್ಯೆಯಾಗಿದೆ. ಮಹಾನಗರಪಾಲಿಕೆ ಇದರ ಕುರಿತು ಸೂಕ್ತ ಮುನ್ನಚ್ಚರಿಕೆ ಕ್ರಮವನ್ನು ವಹಿಸಬೇಕಾಗಿದೆ ಎಂದರು.

ಜಿಲ್ಲಾ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಗೌಡ, ಜಿಲ್ಲಾ ಕಾರ್ಯದರ್ಶೀಗಳಾದ ಫೈಜಲ್, ದೀಪಕ್, ಆಶೀಕ್ ಇಸ್ಮಾಯಿಲ್, ಸಿನಾನ್ ಉಪಸ್ಥಿತರಿದ್ದರು.


Spread the love