ಕೇರಳ ನೆರೆ ಸಂತ್ರಸ್ತರಿಗೆ ವಸ್ತು ರೂಪದ ನೆರವು: ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ
ಭೀಕರ ಪ್ರವಾಹಕ್ಕೆ ತುತ್ತಾದ ಕೇರಳ ರಾಜ್ಯದ ನೆರೆ ಸಂತ್ರಸ್ತರಿಗೆ ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಂಗ್ರಹಿಸಿದ್ದ ಅಕ್ಕಿ, ಸಕ್ಕರೆ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ಹಾಗೂ ಬಟ್ಟೆ ಬರೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿಗಳಾದ ಡಾ.ಸಜಿತ್ಬಾಬು ರವರ ಮೂಲಕ ಹಸ್ತಾಂತರಿಸಲಾಯಿತು.
ಕಳೆದ ಎರಡು ದಿನಗಳ ಅವಧಿಯಲ್ಲಿ ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿಧಿ ಸಂಗ್ರಹ ಹಾಗೂ ವಸ್ತು ರೂಪದ ಸಂಗ್ರಹಕ್ಕೆ ಕರೆ ನೀಡಲಾಗಿದ್ದು, ಜನತೆಯಿಂದ ವ್ಯಾಪಕ ಸ್ಪಂದನೆ ಬರುತ್ತಿದೆ. ಅಕ್ಕಿ, ಸಕ್ಕರೆ, ಎಣ್ಣೆ, ತೆಂಗಿನಕಾಯಿ ಸೇರಿದಂತೆ ಆಹಾರ ಸಾಮಾಗ್ರಿಗಳು, ಬಟ್ಟೆಬರೆಗಳು, ಶೈಕ್ಷಣಿಕ ಸಾಮಾಗ್ರಿಗಳು ಸಂಗ್ರಹವಾಗಿದ್ದು ಅದನ್ನು ವಾಹನದ ಮೂಲಕ ಕಾಸರಗೋಡು ಜಿಲ್ಲೆಗೆ ಸಾಗಿಸಲಾಯಿತು. ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ನೆರೆ ಸಂತ್ರಸ್ತರಿಗಾಗಿ ತೆರೆಯಲಾಗಿದ್ದ ವಸ್ತು ಸಂಗ್ರಹಣಾ ಕೇಂದ್ರಕ್ಕೆ ಮುಟ್ಟಿಸಲಾಯಿತು. ಅಲ್ಲಿನ ಉಸ್ತುವಾರಿಯಾದ ಕಾಸರಗೋಡು ತಾಹಶೀಲ್ದಾರರವರು ವಸ್ತುಗಳನ್ನು ಸ್ವೀಕರಿಸಿದರು. ದ.ಕ.ಜಿಲ್ಲೆಯಾದ್ಯಂತ ಸಂಗ್ರಹವಾಗಿದ್ದ ನಿಧಿಯನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ಮೂಲಕ ಕೇರಳ ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ವರ್ಗಾಯಿಸಲಾಗಿದೆ.
ಸಿಪಿಐ(ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ರವರ ನೇತೃತ್ವದಲ್ಲಿ ಕಾಸರಗೋಡಿಗೆ ತೆರಳಿದ ನಿಯೋಗದಲ್ಲಿ ಡಿವೈಎಫ್ಐ ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಸಿಪಿಐ(ಎಂ) ಮುಖಂಡರಾದ ಮಹಾಬಲ ದೆಪ್ಪೆಲಿಮಾರ್, ಸಂತೋಷ್ ಶಕ್ತಿನಗರ, ಅಶೋಕ್ ಸಾಲಿಯಾನ್, ಕಿಶೋರ್, ಡಿವೈಎಫ್ಐ ಮುಖಂಡರಾದ ದಿವ್ಯರಾಜ್, ಎಸ್ಎಫ್ಐ ಮುಖಂಡರಾದ ವಿಕಾಸ್ ಕುತ್ತಾರ್ ರವರು ಉಪಸ್ಥಿತರಿದ್ದರು.
ನಿಧಿ ಸಂಗ್ರಹ ಹಾಗೂ ವಸ್ತು ರೂಪದ ಸಂಗ್ರಹಕ್ಕೆ ಸಹಕರಿಸಿದ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿಯು ಕೃತಜ್ಞತೆ ಸಲ್ಲಿಸಿದೆ.