ಕೇವಲ ಘೋಷಣೆಗಳಿಗೆ ಸೀಮಿತವಾದ ಬಜೆಟ್ – ಕ್ಯಾಪ್ಟನ್ ಕಾರ್ಣಿಕ್
ಅಪವಿತ್ರ ಮೈತ್ರಿಯ ಸರ್ಕಾರ ಜನತೆಯ ವಿಶ್ವಾಸವನ್ನು ಕಳೆದುಕೊಂಡ ಸಂದರ್ಭದಲ್ಲಿ ಸಾಂದರ್ಭಿಕ ಶಿಶು ಕೇಂದ್ರ ಸರ್ಕಾರದ ಯೋಜನೆಗಳನ್ನು ನಕಲಿ ಮಾಡಿ ಹೊಸ ಹೆಸರುಗಳೊಂದಿಗೆ ಮಂಡಿಸಿರು ಈ ಬಜೆಟ್ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ. ಈ ಬಜೆಟಿನಲ್ಲಿ ಘೋಷಿತ ಯೋಜನೆಗಳು ಕೇವಲ ಮೇಲ್ನೋಟಕ್ಕೆ ಜನರನ್ನು ಖುಷಿ ಪಡಿಸುವ ಯೋಜನೆಗಳಾಗಿದ್ದು ಈ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಸರ್ಕಾರದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ಇದು ಎಲ್ಲರನ್ನು ಒಲೈಸುವ ಅಪವಿತ್ರ ಮೈತ್ರಿ ಸರ್ಕಾರದ ವಿಫಲ ಯತ್ನವಾಗಿದೆ.
ಕರಾವಳಿ ಜಿಲ್ಲೆಗಳ ಭತ್ತ ಬೆಳೆಯುವ ರೈತರಿಗೆ ನೀಡಿರುವ ಸಹಾಯ ಧನ, ಹಾಲು ಉತ್ಪಾದಕರಿಗೆ ಹೆಚ್ಚಿಸಿರುವ ಸಹಾಯ ಧನ, ಸಂಧ್ಯಾ ಸುರಕ್ಷಾ ಯೋಜನೆಗೆ ಹೆಚ್ಚಿಸಿರುವ ಸಹಾಯ ಧನ ಸ್ವಾಗತಾರ್ಹ ನಡೆ. ಕೆರೆಕಟ್ಟೆಗಳನ್ನು ತುಂಬಿಸುವ ಕರೆಗಳ ಸಮಗ್ರ ಅಭಿವೃದ್ಧಿ ಯೋಜನೆಗಳು ಸ್ವಾಗತಾರ್ಹ ನಡೆಯಾದರೂ ಈ ಯೋಜನೆಗಳ ಅನುಷ್ಠಾನ ಅನುಮಾನಸ್ಪದ ಹಾಗೂ ಬೃಹತ್ ಪ್ರಮಾಣದ ಭ್ರಷ್ಠಾಚಾರದ ಎಲ್ಲಾ ಸಾಧ್ಯತೆ ಎದ್ದು ಕಾಣುತ್ತದೆ.
ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಯಲ್ಲಿರುವ ಕಾರ್ಯನಿರವಹಿಸುತ್ತಿರುವವರಿಗೆ ೭ನೇ ವೇತನ ಆಯೋಗದ ಶಿಫಾರಸ್ಸನ್ನು ನೀಡಿರುವುದನ್ನು ಸ್ವಾಗತಿಸುತ್ತ ಅನೇಕ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಶಿಕ್ಷಣ ಸಂಸ್ಥೆಯಲ್ಲಿರುವ ಶಿಕ್ಷಕ ಉಪನ್ಯಾಸಕರ ವೇತನ ಪರಿಷ್ಕರಣೆಯನ್ನು ಕಡೆಗಣಿಸಿರುವುದು, ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದಿರುವುದು ದುರಾದೃಷ್ಟಕರ.