ಕೊಂಕಣಿ ಕಲಾವಿದರಿಗೆ ಮಾಹಿತಿ ಸಭೆ

Spread the love

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಂಕಣಿ ನಾಟಕ ಸಭೆಯ ಸಹಕಾರದಲ್ಲಿ ಆಗಸ್ಟ್ 30 ರಂದು ನಗರದ ಡಾನ್‍ಬಾಸ್ಕೊ ಸಭಾಂಗಣದಲ್ಲಿ ಕೊಂಕಣಿ ಕಲಾವಿದರಿಗೆ ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ಸಭೆ ನಡೆಯಿತು. ಕೊಂಕಣಿ ನಾಟಕ ಸಭೆಯ ಅಧ್ಯಕ್ಷ ವಂ. ಪೀಟರ್ ಡಿಸೋಜ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

1

ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಕೊಂಕಣಿ ಕಲೆಯ ಬೆಳವಣಿಗೆಗಾಗಿ ದುಡಿದ ಕಲಾವಿದರ ಋಣ ಸಂದಾಯ ಮಾಡುವ ಒಂದು ಸಣ್ಣ ಪ್ರಯತ್ನ ಇದಾಗಿದ್ದು, ಸರಕಾರದಿಂದ  ಸಾಹಿತಿ ಕಲಾವಿದರಿಗೆ ಹಲವಾರು ಉಪಯುಕ್ತ ಯೋಜನೆಗಳಿದ್ದರೂ ಮಾಹಿತಿ ಕೊರತೆಯಿಂದ ಯಾರೂ ಇದರ ಪ್ರಯೋಜನ ಪಡೆಯಲು ಮುಂದೆ ಬರುತ್ತಿಲ್ಲ. ಹಾಗಾಗಿ ಕೊಂಕಣಿ ಅಕಾಡೆಮಿಯು ನೇತೃತ್ವ ವಹಿಸಿ ಕಲಾವಿದರ ಮಾಹಿತಿ ಸಂಗ್ರಹಿಸಿ, ಕ್ರೋಢೀಕರಿಸಿ, ಸಂಬಂಧಪಟ್ಟ ಇಲಾಖೆಗೆ ತಲುಪಿಸುತ್ತದೆ. ಇದೊಂದು ಆರಂಭ ಮಾತ್ರ. ಮುಂದೆ ಸಾಹಿತಿಗಳಿಗೆ ಹಾಗೂ ಇತರ ಊರುಗಳಲ್ಲಿಯೂ ಈ ಬಗ್ಗೆ ಮಾಹಿತಿ ಸಭೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

2

ಹಿರಿಯ ಕಲಾವಿದ ಟೊನಿ ರುಜಾಯ್ ಮಾಹಿತಿ ಪುಸ್ತಿಕೆಯನ್ನು ಬಿಡುಗಡೆಗೊಳಿಸಿದರು. ಮತ್ತೊರ್ವ ಕಲಾವಿದ ಗೋಪಾಲ ಗೌಡ ಗುಮಟೆ ಬಾರಿಸಿ ಪ್ರಕಟನೆ ನೀಡುವ ಮೂಲಕ ಕಲಾವಿದರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕರೆ ಕೊಟ್ಟರು. ವೇದಿಕೆಯಲ್ಲಿ ಸಾರಸ್ವತ ಸಮಾಜದ ನಿರಂಜನ್ ರಾವ್, ಕೊಂಕಣಿ ಸಾಂಸ್ಕøತಿಕ ಸಂಘದ ಅಧ್ಯಕ್ಷೆ ವಿದ್ಯಾ ಕಾಮತ್, ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷೆ ಗೀತಾ ಕಿಣಿ ಉಪಸ್ಥಿತರಿದ್ದರು.

ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕರಾದ ಡಾ. ಬಿ. ದೇವದಾಸ ಪೈ ಇವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಈ ಕೆಲಸವನ್ನು ಮುನ್ನಡೆಸಲು ಅಕಾಡೆಮಿಯ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಯಿತು.

ಸಂಚಾಲಕ ಡೊಲ್ಲಾ ಮಂಗಳೂರು ವಂದಿಸಿ ರೇಮಂಡ್ ಡಿಕುನ್ಹಾ ಕಾರ್ಯಕ್ರಮ ನಿರ್ವಹಿಸಿದರು.


Spread the love