ಕೊಡಗು ದುರಂತ: ಪೇಜಾವರ ಶ್ರೀಗಳಿಂದ 10 ಲಕ್ಷ ರೂ. ದೇಣಿಗೆ ಘೋಷಣೆ
ಉಡುಪಿ: ಮಹಾ ಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಹಾಗೂ ಸುಳ್ಯದಲ್ಲಿ ಜನರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ ಪೇಜಾವರ ಮಠದ ಟ್ರಸ್ಟ್ ವತಿಯಿಂದ 10 ಲಕ್ಷ ರೂ.ಗಳ ದೇಣಿಗೆಯನ್ನು ಘೋಷಿಸಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು, ಮುಂದೆ ಇನ್ನಷ್ಟು ಸಹಾಯದ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಚಾತುರ್ಮಾಸ್ಯದಲ್ಲಿರುವ ಪೇಜಾವರ ಶ್ರೀಗಳು ಅಲ್ಲಿಂದ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಕನ್ನಡ ನಾಡಿನ ಅತ್ಯಂತ ರಮಣೀಯ ಸ್ಥಳವಾದ ಕೊಡಗು ಮತ್ತು ಸುಳ್ಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾದ ಅಗಾಧ ಸಂಕಷ್ಟ ಸಂತಾಪಗಳನ್ನು ತಿಳಿದು ನಾಡಿನ ಜನತೆ ಅತ್ಯಂತ ಉದ್ವಿಗ್ನವಾಗಿದೆ. ಜನರು ಅನುಭವಿಸುತ್ತಿರುವ ನೋವು ಅವರ್ಣನೀಯವಾಗಿದೆ. ನಮ್ಮ ಬಂಧುಗಳ ಈ ಸಂದರ್ಭದಲ್ಲಿ ಸ್ಪಂದಿಸುವುದು ಅವರಿಗೆ ಅವಶ್ಯವಿದ್ದ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ನಮ್ಮ ಮಠದ ಟ್ರಸ್ಟಿನಿಂದ ಸದ್ಯಕ್ಕೆ 10 ಲಕ್ಷರೂ. ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಾತುರ್ಮಾಸ್ಯವಾದುದರಿಂದ ನಮಗೆ ಪ್ರತ್ಯಕ್ಷವಾಗಿ ಅಲ್ಲಿಗೆ ಹೋಗಲು ಸಾದ್ಯವಾಗುವುದಿಲ್ಲ. ಚಾತುರ್ಮಾಸ್ಯ ಮುಗಿದ ಕೂಡಲೇ ಅಲ್ಲಿಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸಿ ಪರಿಹಾರ ಕಾರ್ಯ ಸ್ವರೂಪನ್ನು ನಿರ್ಧರಿಸಿ ಜನತೆಯ ವಿಶೇಷ ಸಹಾಯದ ಜೊತೆಗೆ ಮಠದ ಟ್ರಸ್ಟಿನಿಂದ ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿ ಅಲ್ಲಿಯ ಜನತೆಗೆ ನೇರವಾಗಿ ತಲುಪುವಂತೆ ಪರಿಹಾರ ಕಾರ್ಯವನ್ನು ನಡೆಸಲಾಗುವುದೆಂದು ತಿಳಿಸಿದ್ದಾರೆ.
ದೀನ ದುಃಖಿತರ ಸೇವೆ ಭಗವಂತನ ಪರಮಾರಾಧನೆಯೆಂಬ ಭಾಗವತದ ಮಾತಿನಂತೆ ಮಹಾ ಜನತೆಯು ಈ ಪವಿತ್ರ ಕಾರ್ಯದಲ್ಲಿ ನಮ್ಮ ಜೊತೆಗೆ ಸೇರಿ ತಮ್ಮಿಂದ ಸಾಧ್ಯವಿದ್ದ ಸಹಾಯ ಮಾಡಬೇಕಾಗಿ ಅಪೇಕ್ಷಿಸುವುದಾಗಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.