ಕೊಡಗು: ಭಾರೀ ಮಳೆಗೆ ಭೂಕುಸಿತ; ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕರ ಕುಟುಂಬ ಸೇರಿ ಐವರು ಮಣ್ಣಿನಡಿ ಸಿಲುಕಿರುವ ಶಂಕೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತ ಸಂಭವಿಸುತ್ತಿದೆ. ಕಳೆದ ಭಾರಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುವಂತೆ ಮಳೆಯಾಗುತ್ತಿದೆ. ತಲಕಾವೇರಿಯಲ್ಲಿ ಐವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ, ಆನಂದತೀಥ೯ ಮತ್ತು ಇಬ್ಬರು ಅಚ೯ಕರು ನಾಪತ್ತೆಯಾಗಿದ್ದಾರೆ.
ತಲಕಾವೇರಿ ಪುಣ್ಯ ಕ್ಷೇತ್ರ ಬಳಿಯಲ್ಲಿ ಭೂಕುಸಿತದಿಂದಾಗಿ ಎರಡು ಮನೆಗಳು ಸಂಪೂಣ೯ ಮಣ್ಣುಪಾಲಾಗಿವೆ, ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಸ್ಥಳೀಯರೊಂದಿಗೆ ವಿಪತ್ತು ನಿರ್ವಹಣಾ ಪಡೆ ಕೂಡ ಕಾಯಾ೯ಚರಣೆ ನಡೆಸುತ್ತಿದೆ.
ಸುಮಾರು 6 ಕಿ.ಮೀ. ಉದ್ದಕ್ಕೆ ಬೆಟ್ಟಸಾಲು ಕುಸಿದು ಸಂಭವಿಸಿದ ಈ ದುರಂತದಲ್ಲಿ ಎರಡು ಕಾರು, 20 ಕ್ಕೂ ಹೆಚ್ಚು ಹಸುಗಳು ಕಾಣೆಯಾಗಿವೆ.
ಭಾರೀ ಮಂಜು ಮತ್ತು ಮಳೆಯಿಂದಾಗಿ ರಕ್ಷಣಾ ಕಾಯಾ೯ಚರಣೆಗೆ ತೊಡಕಾಗಿದೆ. ಭಾಗಮಂಡಲ – ತಲಕಾವೇರಿ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿರುವುದರಿಂದ ರಕ್ಷಣಾ ಕಾಯ೯ಪಡೆಯ ವಾಹನಗಳೂ ವೇಗವಾಗಿ ಸ್ಥಳಕ್ಕೆ ತೆರಳಲು ಅಡ್ಡಿಯಾಗಿವೆ. ಸ್ಥಳದಲ್ಲಿ ಸ್ಥಳೀಯರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಇಂದು ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ವಸ್ತುಸ್ಥಿತಿ ಮಾಹಿತಿ ಪಡೆದುಕೊಂಡರು.
ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಕೊಡಗಿಗೆ ಭೇಟಿ ನೀಡಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಜತೆಗೆ ಪರಿಹಾರ ಕಾಮಗಾರಿಗಳನ್ನು ಸಚಿವರು ವೀಕ್ಷಿಸಲಿದ್ದಾರೆ.
ಭಾಗಮಂಡಲದ ಭಗಂಡಕ್ಷೇತ್ರ ದ್ವೀಪದಂತಾಗಿದ್ದು, ಭಗಂಡೇಶ್ವರ ದೇವಾಲಯದ ಮೆಟ್ಟಿಲವರೆಗೂ ನದಿ ನೀರು ಬಂದಿದೆ. ಜಿಲ್ಲೆಯಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಡಿಕೇರಿಯಿಂದ ವೀರಾಜಪೇಟೆಗೆ ತೆರಳುವ ರಸ್ತೆಯ ಬೇತ್ರಿ ಸೇತುವೆ ಕಾವೇರಿ ನದಿ ನೀರಿನಿಂದತುಂಬಿಕೊಂಡಿದ್ದು ಸೇತುವೆ ಮೇಲೇ ನೀರು ಹರಿಯುತ್ತಿರುವುದರಿಂದಾಗಿ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಇಲ್ಲಿಯ ತನಕ 700 ಮಂದಿಯನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯ ಹಾರಂಗಿಜಲಾಶಯಕ್ಕೆ 10 ಸಾವಿರ ಕ್ಯೂಸೆಕ್ ಒಳಹರಿವಿದ್ದು, 12 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.