ಕೊರೊನಾ ವೈರಸ್ಗಿಂತ ಚಿಕ್ಕಮಗಳೂರಿಗೆ ಬರುತ್ತಿರುವ ಕೇರಳಿಗರ ಮೇಲೆ ಕಣ್ಣಿಡಬೇಕು; ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು (News18) : ರಾಜ್ಯಕ್ಕೆ ಬರುವ ವಲಸಿಗರು ಕೊರೊನಾ ವೈರಸ್ಗೆ ತುತ್ತಾಗಿದ್ದಾರಾ ಎಂಬುದಕ್ಕಿಂತ ಕೇರಳಿಗರು ರಾಜ್ಯಕ್ಕೆ ಏಕೆ ಬರುತ್ತಿದ್ದಾರೆ ಎಂಬ ಬಗ್ಗೆ ಹದ್ದಿನ ಕಣ್ಣಿಡಬೇಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಸಂಸದೆ, ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಕೇರಳಿಗರ ಸಂಖ್ಯೆ ಹೆಚ್ಚಾಗಿದೆ. ಅವರು ಕೇವಲ ಪ್ರವಾಸದ ಉದ್ದೇಶಕ್ಕಾಗಿ ಮಾತ್ರ ಬರುತ್ತಿಲ್ಲ. ಬೇರೆ ಬೇರೆ ಕಾರಣಗಳಿಗೆ ಬರುತ್ತಿದ್ದಾರೆ. ಅದು ಯಾವ ಕಾರಣಕ್ಕೆ ಜಿಲ್ಲೆಯಲ್ಲಿ ಏಕಾಏಕಿ ಕೇರಳಿಗರ ಸಂಖ್ಯೆ ಹೆಚ್ಚಾಗಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ವಿಚಾರಿಸಬೇಕಾಗಿದೆ ಎಂದು ನೆರೆಯ ರಾಜ್ಯದ ನಾಗರಿಕರ ಮೇಲೆ ಅನುಮಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ದುಪ್ಪಟ್ಟುಗೊಂಡಿರುವ ಕೇರಳಿಗರು ಯಾರು, ಯಾವ ಪ್ರದೇಶದಿಂದ ಬರುತ್ತಿದ್ದಾರೆ. ಅವರು ಏಕೆ ಬರುತ್ತಿದ್ದಾರೆ. ಅವರನ್ನು ಯಾರು ಕರೆ ತರುತ್ತಿದ್ದಾರೆ. ಪ್ರವಾಸೋದ್ಯಮ ಮಾತ್ರ ಅವರ ಉದ್ದೇಶವೇ ಅಥವಾ ಇದರ ಹಿಂದೆ ಬೇರೆ ಏನಾದರೂ ಉದ್ದೇಶ ಇದೆಯೇ ಎಂಬ ಬಗ್ಗೆ ಆಲೋಚಿಸಬೇಕಿದೆ ಎಂದರು.
ಮಂಗಳೂರು ಗಲಭೆ ವೇಳೆಯು ಕೇರಳದಿಂದ ಜನರು ಬಂದಿದ್ದರು. ಈ ಹಿನ್ನೆಲೆ ಈ ಶಂಕೆ ಮೂಡಿದೆ. ಕೇರಳದಿಂದ ಬರುವ ವಾಹನಗಳ ಮೇಲು ಕೂಡ ನಿಗಾ ಇಡಬೇಕಿದೆ. ಅಷ್ಟೇ ಅಲ್ಲದೇ ಅಲ್ಲಿಂದ ಬರುವ ಜನರ ಬಗ್ಗೆ ಸಾಕಷ್ಟು ದೂರು ಕೇಳಿಬಂದಿವೆ. ಅವರ ಚಟುವಟಿಕೆಯ ಬಗ್ಗೆ ಆತಂಕ ವ್ಯಕ್ತವಾಗಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಸತ್ತುಹೋಗಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸುದ್ದಿಯಲ್ಲಿಲ್ಲ, ದೇಶದ ಜನ ಸೋನಿಯಾ ಗಾಂಧಿ,ರಾಹುಲ್ ಗಾಂಧಿಯನ್ನು ಮರೆಯುತ್ತಿದ್ದಾರೆ ಎಂದರು