ಕೊರೋನ ಪಾಸಿಟಿವ್ ಬಂದವರು ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟರೆ ಕ್ರಿಮಿನಲ್ ಮೊಕದ್ದಮೆ: ಜಿಲ್ಲಾಧಿಕಾರಿ ಜಿ ಜಗದೀಶ್
ಉಡುಪಿ: ಸ್ಥಳೀಯವಾಗಿ ಕೊರೋನಾ ಪಾಸಿಟಿವ್ ಬಂದಿರುವ ವ್ಯಕ್ತಿಗಳು ತಮ್ಮ ಟ್ರಾವೆಲ್ ಹಿಸ್ಟರಿಯನ್ನು ಮುಚ್ಚಿಡುವ ಕೆಲಸ ಮಾಡಿದ್ದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಕೊರೋನಾ ಪಾಸಿಟಿವ್ ಬಂದವರ ಟ್ರಾವೆಲ್ ಹಿಸ್ಟರಿಯನ್ನು ಗುರುತಿಸುವ ಕೆಲಸ ನಡೆಸಲಾಗುತ್ತಿದ್ದು ಪಾಸಿಟಿವ್ ಬಂದವರು ಪ್ರಾಥಮಿಕ, ಸೆಕೆಂಡರಿ ಸಂಪರ್ಕ ಬಗ್ಗೆ ಸ್ಪಷ್ಟವಾಗಿ ಹೇಳಿದರೆ, ಕೊರೋನ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಆದುದರಿಂದ ಯಾರು ಕೂಡ ಗೊತ್ತಿರುವ ವಿಚಾರವನ್ನು ಮುಚ್ಚಿಡಬಾರದು.
ಜಿಲ್ಲೆಯಲ್ಲಿ ಇತ್ತೀಚೆಗೆ ಲ್ಯಾಬ್ ಟೆಕ್ನಿಶಿಯನ್ ಒರ್ವರಿಗೆ ಪಾಸಿಟಿವ್ ಬಂದಿದ್ದು ಅವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಅಂದುಕೊಂಡಿದ್ದು ಈಗ ಅವರಿಗೆ ಮುಂಬೈ ಯಿಂದ ಬಂದವರ ಜೊತೆ ಕಾರ್ಯಕ್ರಮ ನಡೆಸಿರುವುದು ಈಗ ಗೊತ್ತಾಗಿದೆ. ಅವರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ ಎಂದರು.
ಮಹಾರಾಷ್ಟ್ರದಿಂದ ಈಗಲೂ ಪ್ರತಿದಿನ 200-250 ಮಂದಿ ಜಿಲ್ಲೆಗೆ ರೈಲು ಮತ್ತು ಕಾರುಗಳ ಮೂಲಕ ಆಗಮಿಸುತ್ತಿದ್ದಾರೆ. ಎಲ್ಲರನ್ನು ಕೂಡ ಹೋಮ್ ಕ್ವಾರಂಟೇನ್ನಲ್ಲಿ ಇರಿಸಲಾಗುತ್ತಿದೆ. ಇವರಲ್ಲಿ ಗರ್ಭಿಣಿ, ಸಣ್ಣ ಮಕ್ಕಳು ಹಾಗೂ 65ವರ್ಷಗಳಿಂದ ಮೇಲ್ಪಟ್ಟವರು ಹಾಗೂ ಇತರ ಕಾಯಿಲೆ ಇರುವವರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.