ಕೊರೋನಾ ನಡುವೆಯೂ ಉಡುಪಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ
ಉಡುಪಿ: ಸಾಂಕ್ರಾಮಿಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸರಳ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಗುರುವಾರ ಆರಂಭವಾಗಿದೆ.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಧಾರ್ಮಿಕ ಆಚರಣೆಗಳು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದವು. ಗುರುವಾರ ಬೆಳಿಗ್ಗೆ ಶ್ರೀ ಕೃಷ್ಣ ಮಠದಲ್ಲಿ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶ್ರೀ ಕೃಷ್ಣ ದೇವರಿಗೆ ‘ತೊಟ್ಟಿಲಿನಲ್ಲಿ ಬಾಲಕೃಷ್ಣ’ ಅಲಂಕಾರ ಮಾಡಿದರು. ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆಯನ್ನು ನೆರವೇರಿಸಿದರು.
ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಪ್ರಯುಕ್ತ ದೇವರ ವಿಶೇಷ ಪೂಜೆಗಾಗಿ ಲಡ್ಡಿಗೆಯನ್ನು ತಯಾರಿಸಲು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಕೊರೋನಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಭಕ್ತಾದಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದ್ದು ಮಠದ ಯೂಟ್ಯೂಬ್ ಚಾನೆಲ್ ಮೂಲಕ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರವನ್ನು ವ್ಯವಸ್ಥೆ ಮಾಡಲಾಗಿದೆ.
ಶ್ರೀಕೃಷ್ಣ ಮಠದಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಸರಕಾರದ ಆದೇಶ ಪಾಲನೆಯೊಂದಿಗೆ ಸರಳ ರೀತಿಯಲ್ಲಿ ಆಚರಣೆ ಮಾಡುವುದರಿಂದ ಭಕ್ತಾಧಿಗಳಿಗೆ ಭಾಗವಹಿಸಲು ಸಾಧ್ಯವಾಗದಿರುವುದರಿಂದ, ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಸಾಧ್ಯವಾದಷ್ಟು ಭಕ್ತಾಧಿಗಳಿಗೆ ಕೃಷ್ಣ ಪ್ರಸಾದ ವಿತರಣೆ ಮಾಡಬೇಕೆಂಬ ಉದ್ದೇಶದಿಂದ ಮಠದಲ್ಲಿ ಒಂದು ಲಕ್ಷ ಉಂಡೆ ಹಾಗೂ ಒಂದು ಲಕ್ಷ ಚಕ್ಕುಲಿಯನ್ನು ತಯಾರಿಸಿ ವಿತರಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಸೆ. 11ರಂದು ಮಧ್ಯಾಹ್ನ 3 ರಿಂದ ಸಂಜೆ 6ರವರೆಗೆ ಕೃಷ್ಣಮಠದ ರಥಬೀದಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಕೊರೊನಾ ಸೋಂಕು ಹರಡುವಿಕೆ ತಡೆಯಲು ಜಿಲ್ಲಾಡಳಿತದ ಸೂಚನೆಯಂತೆ ಅಂದು ಮಧ್ಯಾಹ್ನ 12.30ರಿಂದ ಸಂಜೆ 5.30ರವರೆಗೆ ಭಕ್ತರಿಗೆ ರಥಬೀದಿ ಪ್ರವೇಶಕ್ಕೆ ನಿರ್ಬಂಧವಿದೆ. ಲೀಲೋತ್ಸವ ಮುಗಿದ ಬಳಿಕ ಕನಕನ ಕಿಂಡಿಯ ಮೂಲಕ ಭಕ್ತರು ದೇವರ ದರ್ಶನ ಪಡೆಯಬಹುದು.