ಕೊರೋನಾ ಭೀತಿ: ಸಂಡೆ ಲಾಕ್ ಡೌನ್ ಗೆ ಕುಂದಾಪುರದಲ್ಲಿ ಉತ್ತಮ ಪ್ರತಿಕ್ರಿಯೆ
ಕುಂದಾಪುರ: ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಸಂಡೇ ಲಾಕ್ ಡೌನ್ ಕುಂದಾಪುರ ನಗರವೂ ಸೇರಿದಂತೆ ತಾಲೂಕಿನೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಒಟ್ಟು 33 ಗಂಟೆಗಳ ಕಾಲ ಸರ್ಕಾರ ಹೊರಡಿಸಿರುವ ಕಟ್ಟುನಿಟ್ಟಿನ ಲಾಕ್ಡೌನ್ನಿಂದ ಕುಂದಾಪುರ ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗಗಳು ಸಂಪೂರ್ಣ ಬಂದ್ ಆಗಿವೆ.
ಹಾಲು, ಮೆಡಿಕಲ್, ಪೇಪರ್, ಬಿಟ್ಟರೆ ಬೇರಾವುದೇ ಅಂಗಡಿಗಳು ತೆರೆದಿಲ್ಲ. ಬೈಂದೂರು, ಗಂಗೊಳ್ಳಿ ಭಾಗಗಳಿಂದ ಕುಂದಾಪುರ ನಗರಕ್ಕೆ ಸಂಪರ್ಕಿಸುವ ಚಿಕನ್ಸಾಲ್ ರಸ್ತೆ ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್ಗಳನ್ನಿಟ್ಟು ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಗರ ಪ್ರವೇಶಿಸುವ ಪ್ರತಿಯೊಬ್ಬರ ಮಾಹಿತಿ ಕಲೆಹಾಕಿ ತುರ್ತು ಕೆಲಸಗಳಿದ್ದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ವೃತ್ತ ಶಾಸ್ತ್ರೀ ಸರ್ಕಲ್ ಹಾಗೂ ಚರ್ಚ್ ರಸ್ತೆಯ ಪ್ರವೇಶದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿಲ್ಲ. ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಗಸ್ತು ಬಿಟ್ಟರೆ, ಉಳಿದ್ಯಾವ ಕಡೆಗಳಲ್ಲೂ ಪೊಲೀಸರು ರಸ್ತೆಗಿಳಿದಿಲ್ಲ. ಪೊಲೀಸ್ ಸಿಬ್ಬಂದಿಗಳು ಫೀಲ್ಡಿಗಿಳಿಯದಿದ್ದರೂ ಕೊರೋನಾ ಭೀತಿಗೆ ಸಾರ್ವಜನಿಕರೆ ಸ್ವತಃ ಮನೆಯಲ್ಲೆ ಲಾಕ್ ಆಗಿದ್ದಾರೆ.
ಇನ್ನು ತಾಲೂಕಿನೆಲ್ಲಡೆ ಕೃಷಿ ಚಟುವಟಿಕೆಗಳು ಎಂದಿನಂತೆ ಗರಿಗೆದರಿದೆ. ಮಳೆ ಸ್ವಲ್ಪ ಇಳಿಮುಖವಾಗಿದ್ದು, ಕೃಷಿಕರಿಕಗೆ ಲಾಕ್ಡೌನ್ ಬಿಸಿ ತಟ್ಟಿಲ್ಲ. ಹೆಮ್ಮಾಡಿ, ಗಂಗೊಳ್ಳಿ, ಸೇರಿಂದಂತೆ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಕೃಷಿಕರು ನಾಟಿ ಕಾರ್ಯದಲ್ಲಿ ನಿರತರಾಗಿರುವ ದೃಶ್ಯಗಳು ಕಂಡುಬಂದವು. ಪ್ರವಾಸಿಗರಿಲ್ಲದೇ ತ್ರಾಸಿ, ಮರವಂತೆ ಬೀಚ್ ಬಿಕೋ ಎನ್ನುತ್ತಿತ್ತು. ಬೆರಳೆಣಿಕೆಯ ಲಾರಿ ಚಾಲಕರು ಕಡಲ್ಕೊರೆತ ತಡೆಗಾಗಿ ಹಾಕಲಾಗಿದ್ದ ಕಲ್ಲುಬಂಡೆಯ ಮೇಲೆ ನಿಂತು ಅಪಾಯಕಾರಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. ಗಂಗೊಳ್ಳಿ ರಸ್ತೆಯಲ್ಲಿ ವಾಹನ ಹಾಗೂ ಜನಸಂಚಾರ ವಿರಳವಾಗಿದ್ದರಿಂದ ನವಿಲೊಂದು ರಸ್ತೆ ಬದಿ ನಿಂತು ಗರಿಬಿಚ್ಚಿದ ದೃಶ್ಯ ಗಮನಸೆಳೆಯಿತು.
ಇನ್ನು ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಖಾಸಗಿ ವಾಹನಗಳ ತಿರುಗಾಟ ಬಿಟ್ಟರೆ ರಿಕ್ಷಾ ಹಾಗೂ ಖಾಸಗಿ ಬಸ್ಗಳ ಓಡಾಟ ಸಂಪೂರ್ಣ ಸ್ತಬ್ಧಗೊಂಡಿದೆ.