ಕೊರೋನಾ ಭೀತಿಯಲ್ಲೂ ಲಾಭದ ಆಸೆ: ಸಿಸಿಬಿಯಿಂದ 50 ಲಕ್ಷ ರೂ ಮೌಲ್ಯದ ನಕಲಿ ಸ್ಯಾನಿ ಟೈಸರ್ಸ್ ವಶ!
ಬೆಂಗಳೂರು: ಇಡೀ ದೇಶವೇ ಕೊರೋನಾ ಭೀತಿಯಲ್ಲಿ ಮುಳುಗಿರುವಾಗ ಇತ್ತ ಕೆಲ ದುಷ್ಕರ್ಮಿಗಳು ಮಾತ್ರ ಈ ಪರಿಸ್ಥಿತಿಯ ಲಾಭ ಪಡೆದು ನಕಲಿ ಸ್ಯಾನಿಟೈಸರ್ಸ್ ತಯಾರಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ನಗರದಲ್ಲಿ ನಕಲಿ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ವೇಳೆ ಸುಮಾರು 56 ಲಕ್ಷ ರೂ ಮೌಲ್ಯದ ನಕಲಿ ಸ್ಯಾನಿಟೈಸರ್ ಗಳನ್ನು ಜಪ್ತಿ ಮಾಡಿದ್ದಾರೆ. ನಗರದ ಚಾಮರಾಜಪೇಟೆ ಸಮೀಪದ ಜ್ಯೋತಿ ಕೆಮಿಕಲ್ಸ್ ಹಾಗೂ ಸ್ವಾತಿ ಆ್ಯಂಡ್ ಕಂಪನಿಗಳ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಕಲಿ ಸ್ಯಾನಿಟೈಸರ್ ಗಳ ತಯಾರಿಸುತ್ತಿದ್ದ ಆರೋಪದ ಮೇರೆಗೆ ರಾಜು ಹಾಗೂ ಚಂದನ್ ಎಂಬುವವರನ್ನು ಬಂಧಿಸಲಾಗಿದೆ.
ಗೋದಾಮಿನಲ್ಲಿ ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್ ಸಿದ್ದಪಡಿಸಲಾಗುತ್ತಿತ್ತು. ದಾಳಿ ವೇಳೆ ಒಟ್ಟು 280 ಲೀಟರ್ ಸ್ಯಾನಿಟೈಸರ್, 4500 ಸ್ಟಿಕರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 50 ಲೀಟರ್ isoproyl alcoholಗೆ ಒಂದು ಸ್ಪೂನ್ brilliant blue colour ಹಾಗೂ ಒಂದು ಸ್ಪೂನ್ perfumne ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು. ಲೈಸೆನ್ಸ್ ಮತ್ತು ವೈಜ್ಞಾನಿಕ ಅನುಮತಿ ಇಲ್ಲದೆ ಸ್ಯಾನಿಟೈಸರ್ ಗಳ ತಯಾರಿಸಲಾಗುತ್ತಿತ್ತು. ಹೀಗೆ ತಯಾರಿಸಲಾದ ಸ್ಯಾನಿಟೈಸರ್ ಗಳನ್ನು ಪ್ಲಾಸ್ಟಿಕ್ ಡಬ್ಬಗಳಿಗೆ ತುಂಬಿ ರಟ್ಟಿನ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಹತ್ತು ಪಟ್ಟು ದುಬಾರಿ ಲಾಭಕ್ಕೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಆರೋಪಿಗಳನ್ನು ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಹಾಗೂ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.