ಕೊರ್ಗಿ ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ ತಿರುವು: ಕೊಲೆ ಪ್ರಕರಣ ದಾಖಲು

Spread the love

ಕೊರ್ಗಿ ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ ತಿರುವು: ಕೊಲೆ ಪ್ರಕರಣ ದಾಖಲು

ಕುಂದಾಪುರ: ಮೂರು ವರ್ಷಗಳ ಹಿಂದೆ ನಿಗೂಢ ನಾಪತ್ತೆಯಾಗಿರುವ ತಾಲೂಕಿನ ಕೊರ್ಗಿ ಗ್ರಾಮದ ಮಾಲತಿ ಶೆಟ್ಟಿ(65) ಪ್ರಕರಣ ತಿರುವು ಪಡೆದುಕೊಂಡಿದೆ. ಹೈಕೋರ್ಟ್‌ ನಿರ್ದೇಶನದಂತೆ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲುಗೊಂಡಿದೆ. ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ.

ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ನಿವಾಸಿ, ನಿವೃತ್ತ ಶಿಕ್ಷ ಕ ಕೆದೂರು ಭಾಸ್ಕರ ಶೆಟ್ಟಿಯವರ ಪತ್ನಿ ಮಾಲತಿ ಶೆಟ್ಟಿಯವರು 2015ರ ಜೂ.24ರಂದು ಕಣ್ಮರೆಯಾಗಿದ್ದರು. ಜೂ.26ರಂದು ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಂದಿನ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ ನಿರ್ದೇಶನದಡಿ ಪತ್ತೆಗಾಗಿ ವ್ಯಾಪಕ ಹುಡುಕಾಟ ನಡೆದಿದ್ದರೂ ಸುಳಿವು ಲಭಿಸಿರಲಿಲ್ಲ.

ತಾಯಿಯನ್ನು ಹುಡುಕಿಕೊಟ್ಟವರಿಗೆ ರೂ.1ಲಕ್ಷ ಬಹುಮಾನ ನೀಡುವುದಾಗಿ ಅವರ ಮಕ್ಕಳು ಘೋಷಿಸಿದ್ದರು. ಅಲ್ಲದೆ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಎಲ್ಲಾ ಆಯಾಮದಿಂದ ತನಿಖೆ ನಡೆಸಿ ಉಚ್ಚ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದ್ದರು. ಇದರಲ್ಲಿ ನಾಪತ್ತೆಗೆ ಸಂಬಂಧಿಸಿದ ತಳ್ಳಿಅರ್ಜಿ ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿತ್ತು. ತಳ್ಳಿಅರ್ಜಿಯಲ್ಲಿ 6 ಮಂದಿ ದುಷ್ಕರ್ಮಿಗಳು ಚಿನ್ನಾಭರಣಕ್ಕಾಗಿ ಮಹಿಳೆಯನ್ನು ಕೊಂದು ಸುಟ್ಟುಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಹೈಕೋರ್ಟ್‌ ಆದೇಶದಂತೆ ಕೊಲೆ ಪ್ರಕರಣ ದಾಖಲುಗೊಂಡಿದ್ದು ತನಿಖೆ ಮುಂದುವರಿಸಲಾಗಿದೆ.


Spread the love