ಕೋಟ: ಐರೋಡಿ ಗ್ರಾಮ ಪಂಚಾಯಿತಿ ಮತ್ತು ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಕ್ಕೆ ಅಧಿಕಾರಿಗಳ ಮೂಲಕ ತಪ್ಪು ಮಾಹಿತಿ ನೀಡಿ ಮರುಳು ಲೀಸ್ದಾರರು ಸೀತಾ ನದಿಯಿಂದ ಅವ್ಯಾವಹತವಾಗಿ ಮರಳು ತೆಗೆಯುತ್ತಿದ್ದಾರೆ. ಇದರಿಂದ ಕುದ್ರುವಾಸಿಗಳಿಗೆ ಸ್ಥಳೀಯರಿಗೆ ದಿನ ನಿತ್ಯ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರೋರ್ವರು ನೀಡಿದ ದೂರಿನ ಅನ್ವಯ ಗುರುವಾರದಂದು ಕುಂದಾಪುರ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಐರೋಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮರುಳು ತೆಗೆಯುವ ನಿರಂತರ ಪ್ರಕ್ರಿಯೆಯಿಂದಾಗಿ ಕುದ್ರು ಪರಿಸರ ಹಾಳಾಗಿದೆ. ಹಿಂದೆ ನಮ್ಮ ಹಿರಿಯರು ದೋಣಿಯಲ್ಲಿ ಮಣ್ಣು ಹೊತ್ತು ಗುಡ್ಡೆ ಹಾಕಿ ನಿರ್ಮಿಸಿದ ಕುದ್ರುಗಳು ಇಂದು ಹೊಳೆಯಲ್ಲಿ ಮರುಳು ತಗೆಯುವುದರ ಪರಿಣಾಮ ಕುದ್ರುಗಳು ಹೊಳೆ ಪಾಲಾಗುತ್ತಿದೆ. ಸುಮಾರು ಒಂದು ಅಡಿಗಳಷ್ಟು ಈಗಾಗಲೇ ಕುದ್ರು ಮುಳುಗಿದ್ದು ಮುಂದೆ ಸಂಪೂರ್ಣ ಕುದ್ರು ಮುಳುಗಲಿದೆ. ಅಲ್ಲದೇ ಹಿಂದೆ ಇದೇ ಪರಿಸರದಲ್ಲಿ ಕಪ್ಪೆಚಿಪ್ಪು (ಮರುವಾಯಿ,ಕೊಯ್ಯೋಲು) ಸಂಗ್ರಹಿಸಿ ವ್ಯಾಪಾರ ನಡೆಸಿ ಜೀವನ ನಡೆಸುತ್ತಿದ್ದ ಅದೆಷ್ಟೆ ಕುಟುಂಬಗಳಿಗೆ ಮರಳುಗಾರಿಕೆಯಿಂದ ಇಂದು ಕೆಲಸ ಇಲ್ಲವಾಗಿದೆ. ಪ್ರತಿ ಸಾರಿಯೂ ಇಲ್ಲಿ ಪ್ರತಿಭಟನೆ ನಡೆಸಿದಾಗ ಬರುವ ಅಧಿಕಾರಿಗಳೂ, ಇಲ್ಲಿನ ಪರಿಸ್ಥಿತಿ ಗಮನಿಸಿ ಕೂಡ ಮರಳು ಧಣಿಗಳ ಪರವಾಗಿ ವರದಿ ಮಾಡುತ್ತಿದ್ದು ಸರಕಾರದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಈ ಸಂದರ್ಭ ತಹಶೀಲ್ದಾರ್ ತಿಪ್ಪೆಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹೇಶ್, ಕಿರಿಯ ಅಭಿಯಂತರಾದ ನಂದಾ, ಐರೋಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಪಾಂಡೇಶ್ವರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೇಮ್ಸ್ ಡಿ ಸಿಲ್ವ, ಐರೋಡಿ ಪಂಚಾಯಿತಿ ಅಧ್ಯಕ್ಷ ಮೋಸೆಸ್ ರೋಡ್ರಿಗಸ್, ಪಾಂಡೇಶ್ವರ ಪಂಚಾಯಿತಿ ಅಧ್ಯಕ್ಷ ಗೋವಿಂದ ಪೂಜಾರಿ, ಐರೋಡಿ ಪಂಚಾಯಿತಿ ಮಾಜಿ ಅಧ್ಯಕ್ಷ ವಿಠಲ್ ಪೂಜಾರಿ, ಪಾಂಡೇಶ್ವರ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಠಲ್ ಪೂಜಾರಿ, ಲೀಲಾವತಿ ಗಂಗಾಧರ, ಪಂಚಾಯಿತಿ ಸದಸ್ಯರಾದ ಚಂದ್ರ ಮೋಹನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.