ಕೋಟ ಶ್ರೀನಿವಾಸ ಪೂಜಾರಿಗೆ ದಕ ಜೊತೆ ಉಡುಪಿ ಜಿಲ್ಲಾ ಉಸ್ತುವಾರಿ ನೀಡಿ – ಬಿಲ್ಲವ ಮುಖಂಡರ ಆಗ್ರಹ

Spread the love

ಕೋಟ ಶ್ರೀನಿವಾಸ ಪೂಜಾರಿಗೆ ದಕ ಜೊತೆ ಉಡುಪಿ ಜಿಲ್ಲಾ ಉಸ್ತುವಾರಿ ನೀಡಿ – ಬಿಲ್ಲವ ಮುಖಂಡರ ಆಗ್ರಹ

ಉಡುಪಿ: ಮುಜರಾಯಿ , ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜೊತೆಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಉಡುಪಿ ಜಿಲ್ಲೆಯ ಬಿಲ್ಲವ ಮುಖಂಡರು ಆಗ್ರಹಿಸಿದ್ದಾರೆ.

ಈ ಕುರಿತು ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಲ್ಲವ ಮುಖಂಡ ಅಚ್ಯುತ ಅಮೀನ್ ಅವರು ಈ ಬಾರಿಯ ಸರಕಾರದಲ್ಲಿ ಬಿಜೆಪಿ ಹೈಕಮಾಂಡ್ ಸದಾ ಸರಳ ಸಜ್ಜನಿಕೆಯ ವ್ಯಕ್ತಿಯಾದ ಕೋಟ ಶ್ರೀನಿವಾಸ ಪೂಜಾರಿಯವರು ಮಂತ್ರಿಯಾಗಿರುವುದಕ್ಕೆ ಬಿಲ್ಲವ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿತ್ತು. ಯಾವುದೇ ರೀತಿಯ ಲಾಬಿ ಮಾಡದೇ ಒರ್ವ ಸಾಮಾನ್ಯ ವ್ಯಕ್ತಿಗೆ ಲಭಿಸಿದ ಅವಕಾಶ ಇದಾಗಿತ್ತು. ಆದರೆ ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ನೀಡದಂತೆ ಜಿಲ್ಲೆಯಿಂದ ಆಯ್ಕೆಯಾದ ಕೆಲವು ಶಾಸಕರು ಮುಖ್ಯಮಂತ್ರಿಗೆ ಮನವಿ ನೀಡಿದ್ದಾರೆ ಎಂದು ಗುಮಾನಿ ಇದ್ದು ಇದೇ ವೇಳೆಯಲ್ಲಿ ನಿನ್ನೆಯ ದಿನ ಕೋಟ ಶ್ರೀನಿವಾಸ ಪೂಜಾರಿಯನ್ನು ಉಡುಪಿ ಜಿಲ್ಲೆಯನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನು ನೀಡಿದ್ದಾರೆ ಇದು ಖಂಡನೀಯ ಎಂದರು.

ಸರಕಾರದ ಈ ನಿರ್ಧಾರದ ಕುರಿತು ಕಟಪಾಡಿಯ ಬಿಲ್ಲವರ ಶಕ್ತಿ ಕೇಂದ್ರ ವಿಶ್ವನಾಥ ಕ್ಷೇತ್ರದಲ್ಲಿ ಸಭೆ ನಡೆಸಿ ಬಿಲ್ಲವ ಮುಖಂಡರ ಸಭೆ ನಉಡುಪಡೆಸಿದ್ದು ಜಿಲ್ಲೆಯ 5 ಶಾಸಕರನ್ನು ಭೇಟಿ ಮಾಡಿ ಮುಖ್ಯಮಂತ್ರಿಯವರಲ್ಲಿ ಕೋಟ ಶ್ರೀನಿವಾಸ ಪೂಜಾರಿಯನ್ನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಆಗ್ರಹಿಸುವಂತೆ ಕೋರಲಾಗುವುದು. ಒಂದು ವೇಳೆ ಇದಕ್ಕೆ ತಪ್ಪಿದ್ದಲ್ಲಿ ಮತ್ತೆ ಪುನಃ ಸಪ್ಟೆಂಬರ್ 19ರಂದು ಸಭೆ ಸೇರಿ ಮುಂದಿನ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದರು.

ಪ್ರಸ್ತುತ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ನೇಮಿಸಿದ್ದು ಅವರಿಗೆ ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ವಿಶೇಷ ಜವಾಬ್ದಾರಿ ಇದ್ದು ಇದರ ಜೊತೆ ಹಾವೇರಿ ಜಿಲ್ಲೆಯ ಜವಾಬ್ದಾರಿ ಕೂಡ ನೀಡಿದ್ದಾರೆ. ಬಿಲ್ಲವ ಸಮುದಾಯದವರಿಗೆ ಹಿಂದೆಯೂ ಕೂಡ ನೋವುಂಟು ಮಾಡುವ ಕೆಲಸ ಸರಕಾರಗಳಿಂದ ನಡೆದಿದ್ದು ಹಿಂದೆ ವಿನಯ್ ಕುಮಾರ್ ಸೊರಕೆಯವರು ಮಂತ್ರಿಯಾಗಿದ್ದಾಗ ಅವರ ಸಚಿವ ಸ್ಥಾನವನ್ನು ಕೈಬಿಟ್ಟು ಬೇರೆಯವರಿಗೆ ನೀಡಲಾಗಿತ್ತು. ಬಿಲ್ಲವ ಸಮುದಾಯ ಕೇವಲ ವೋಟ್ ಬ್ಯಾಂಕ್ ಪ್ರಯುಕ್ತ ಮಾತ್ರ ಉಪಯೋಗಿಸಿಕೊಂಡು ಬಿಲ್ಲವರಿಗೆ ಅನ್ಯಾಯ ಮಾಡಿದರೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಬೇಕಾದೀತು. ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದು ಸಮುದಾಯವನ್ನು ಹಗುರವಾಗಿ ಪರಿಗಣಿಸದಂತೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಇನ್ನೋರ್ವ ಬಿಲ್ಲವ ನಾಯಕ ಮಾಜಿ ನಗರಸಭಾ ಅಧ್ಯಕ್ಷ ಕಿರಣ್ ಕುಮಾರ್ ಅವರು ಕೋಟ ಶ್ರೀನಿವಾಸ ಪೂಜಾರಿ ಒರ್ವ ಸಾಮಾನ್ಯ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದು, ಅವರ ಸ್ವ ಪ್ರಯತ್ನದಿಂದ ಮಂತ್ರಿಯಾಗಿದ್ದು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡದಂತೆ ಶಾಸಕರು ಮನವಿ ನೀಡಿದ್ದೇ ಆದರೆ ಅದು ಖಂಡನೀಯ. ಒಂದು ವೇಳೆ ಅಂತಹ ಪ್ರಯತ್ನ ನಡೆದಿದ್ದರೆ ಶಾಸಕರು ಅವರಿಗೆ ಸ್ವಾಭಿಮಾನ ಇದ್ದರೆ ಅವರು ಪೂಜಾರಿಯವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜೊತೆಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಕೂಡ ನೀಡುವಂತೆ ಆಗ್ರಹಿಸಬೇಕು. ಅವರು ಎರಡೂ ಜಿಲ್ಲೆಯ ಉಸ್ತುವಾರಿಯನ್ನು ನಿರ್ವಹಿಸಲು ಶಕ್ತರಿದ್ದಾರೆ. ಬಿಲ್ಲವ ಸಮುದಾಯವನ್ನು ತುಳಿಯುವ ಪ್ರಯತ್ನ ಹಲವು ಸಮಯದಿಂದ ನಡೆಯುತ್ತಿದ್ದು ಇನ್ನಾದರೂ ಅದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಲ್ಲವ ಮುಖಂಡರಾದ ನವೀನ್ ಅಮೀನ್, ಬಿ ಎನ್ ಶಂಕರ ಪೂಜಾರಿ, ಪ್ರವೀಣ್ ಪೂಜಾರಿ, ಸುಧಾಕರ ಡಿ ಅಮೀನ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love