ಕೋಟೆಕಾರು ವ್ಯವಸಾಯ ಬ್ಯಾಂಕ್ ದರೋಡೆ ಯತ್ನ ಪ್ರಕರಣದ ಆರೋಪಿಗಳ ಸೆರೆ

Spread the love

ಕೋಟೆಕಾರು ವ್ಯವಸಾಯ ಬ್ಯಾಂಕ್ ದರೋಡೆ ಯತ್ನ ಪ್ರಕರಣದ ಆರೋಪಿಗಳ ಸೆರೆ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಶಾಖೆಗೆ ನುಗ್ಗಿ ಹಾಡುಹಗಲೇ ಬ್ಯಾಂಕ್ ನಲ್ಲಿದ್ದ ರೂ. 5.5 ಕೋಟಿ ಮೌಲ್ಯದ 20 ಕೆಜಿ ತೂಕದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಸೋಮೇಶ್ವರ ನಿವಾಸಿ ರಾಮಚಂದ್ರ (57), ಮತ್ತು ಕೋಟೆಕಾರು ನಿವಾಸಿ ಮೋಹನ್ ಕುಮಾರ್ (47) ಎಂದು ಗುರುತಿಸಲಾಗಿದೆ
ಪ್ರಕರಣದ ವಿವರ

ಜೂನ್ 23 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಇಬ್ಬರು ಮುಸುಕುದಾರಿಗಳು ಕೆ.ಸಿ ರೋಡ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ಶಾಖೆಗೆ ಒಳ ಪ್ರವೇಶಿಸಿ ದಾರಿಯಲ್ಲಿದ್ದ ನೈಟ್ ವಾಚ್ ಮೆನ್ ನ್ನು ದೂಡಿಕೊಂಡು ಒಳಗೆ ಬಂದು ಫಿರ್ಯಾಧಿದಾರರನ್ನು ಹಾಗೂ ಬ್ಯಾಂಕಿನ ಗುಮಾಸ್ತ ಸುಧೀರ್ ರಂಜನ್ ಹಾಗೂ ಚಿನ್ನಾಭರಣ ಮೌಲ್ಯ ಮಾಪಕರಾದ ರಾಮಚಂದ್ರ ಆಚಾರ್ಯರವರಿಗೆ ಚೂರಿ ತೋರಿಸಿ ಫಿರ್ಯಾದಿದಾರರಾದ ಮನೋಹರಿ ಎಂಬವರಿಗೆ ಬೆದರಿಸಿ ಅವರಿಂದ ಮೊಬೈಲ್ ಫೋನ್ ನ್ನು ಪಡಕೊಂಡು ಟಾಯ್ಲೆಟ್ ರೂಮಿಗೆ ತಳ್ಳಿ ಲಾಕ್ ಮಾಡಿದ್ದಲ್ಲದೇ ಮುಸುಕುದಾರಿಗಳು ಬ್ಯಾಂಕಿನ ಚಿನ್ನಾಭರಣಗಳಿರುವ ಭದ್ರತಾ ಕೊಠಡಿಗೆ ಹೋಗಿ ಎಲ್ಲಾ ಚಿನ್ನಾಭರಣಗಳನ್ನು ದೋಚಿ ಚೀಲಕ್ಕೆ ತುಂಬಿಕೊಂಡು ಬ್ಯಾಂಕ್ ನ ಮುಖ್ಯದ್ವಾರದ ಶೆಟರ್ ನ್ನು ಎಳೆದು ವಾಚ್ ಮೆನ್ ನ್ನು ದೂಡಿಕೊಂಡು ಹೋಗಿದ್ದು, ಈ ಸಮಯ ಫಿರ್ಯಾದಿದಾರರು ಮತ್ತು ಇತರ ಬ್ಯಾಂಕ್ ನ ಸಿಬ್ಬಂದಿಗಳು ಟಾಯ್ಲೆಟ್ ನ ಬಾಗಿಲು ಹೊಡೆದು ಹೊರಗೆ ಹೋಗುವಾಗ ಇಬ್ಬರು ಮುಸುಕುದಾರಿಗಳು ಬೈಕಿನಲ್ಲಿ ಪರಾರಿಯಾಗಲು ಹೊರಟಾಗ ಫಿರ್ಯಾದಿದಾರರೊಂದಿಗೆ ಇದ್ದ ರಾಮಚಂದ್ರ ಆಚಾರ್ಯ ರವರು ದೊಡ್ಡ ಕಲ್ಲೊಂದನ್ನು ತೆಗೆದು ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದ ಸಮಯ ದರೋಡೆಕೋರರಿಗೆ ಕಲ್ಲು ತಾಗಿ ಅವರು ನಿಯಂತ್ರಣ ತಪ್ಪಿ ಬಿದ್ದಾಗ ಬೈಕ್ ನ ಹಿಂಬದಿ ಕುಳಿತಿದ್ದವನ ಕೈಯಲ್ಲಿದ್ದ ಚಿನ್ನಾಭರಣಗಳನ್ನು ತುಂಬಿಸಿಟ್ಟಿದ್ದ ಗೋಣಿಯನ್ನು ಬಿಸಾಡಿ ಪರಾರಿಯಾಗಿದ್ದರು. ಈ ಘಟನೆಯ ಬಗ್ಗೆ ಬ್ಯಾಂಕ್ ನ ಮೇನೆಜರ್ ರವರು ನೀಡಿದ ಫಿರ್ಯಾದಿನಂತೆ ಪ್ರಕರಣ ದಾಖಲಾಗಿತ್ತು

ಈ ಕೃತ್ಯವನ್ನು ನಡೆಸಿದ ಆರೋಪಿಗಳ ಪತ್ತೆಯ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳ ಪತ್ತೆಗಾಗಿ ಪ್ರಯತ್ನಿಸುತ್ತಿದ್ದ ಸಮಯ ದೊರೆತ ಮಹತ್ವದ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಜುಲೈ 4 ರಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಿಸಿದಾಗ ಕೋಟೆಕಾರು ಸಹಕಾರಿ ನಿಯಮಿತ ಬ್ಯಾಂಕ್ ನಲ್ಲಿ ದಿನಾಂಕ: 23-06-2017 ರಂದು ದರೋಡೆಗೆ ಯತ್ನಿಸಿದ ಕೃತ್ಯವು ಬೆಳಕಿಗೆ ಬಂದಿರುತ್ತದೆ. ಆರೋಪಿಗಳ ಪೈಕಿ ರಾಮಚಂದ್ರ ಎಂಬಾತನು ಎಂಪೈಯರ್ ಮಾಲ್ ನಲ್ಲಿ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದನು. ಇನ್ನೋರ್ವ ಆರೋಪಿ ಮೋಹನ್ ಕುಮಾರ್ ಎಂಬಾತನು ಲಕ್ಕಿ ಟ್ರಾನ್ಸ್ ಪೋರ್ಟ್ ಎಂಬ ಟ್ರಾನ್ಸ್ ಪೋರ್ಟ್ ಕಂಪೆನಿಯ ಪಾಲುದಾರನಾಗಿರುತ್ತಾನೆ. ಆರೋಪಿಗಳು ತಮ್ಮ ವ್ಯವಹಾರದಲ್ಲಿ ನಷ್ಟವುಂಟಾಗಿ ಹಲವಾರು ವ್ಯಕ್ತಿಗಳಿಂದ ಸಾಲವನ್ನು ಪಡೆದಿದ್ದು ಬ್ಯಾಂಕ್ ನ ಚಿನ್ನಾಭರಣಗಳನ್ನು ದರೋಡೆ ಮಾಡಿ ಅದನ್ನು ಮಾರಾಟ ಮಾಡಲು ಸಾಲವನ್ನು ಪಡೆದ ವ್ಯಕ್ತಿಗಳ ಸಾಲವನ್ನು ತೀರಿಸಲು ಆರೋಪಿಗಳು ಹೇಳಿಕೆ ನೀಡಿರುತ್ತಾರೆ. ಆರೋಪಿಗಳು ಬ್ಯಾಂಕ್ ನ ಸಿಬ್ಬಂದಿಗಳನ್ನು ಟಾಯ್ಲೆಟ್ ನಲ್ಲಿ ಕೂಡಿ ಹಾಕಿ ಸುಮಾರು ರೂ 5.5 ಕೋಟಿ ಮೌಲ್ಯದ 20 ಕೆ ಜಿ ಚಿನ್ನಾಭರಣಗಳನ್ನು ಬ್ಯಾಂಕ್ ನಿಂದ ದೋಚಿ ಪರಾರಿಯಾಗಲು ಯತ್ನಿಸಿದ್ದರು. ಜನ ಸಂಚಾರವಿರುವ ಕೆ ಸಿ ರೋಡ್ ಪರಿಸರದಲ್ಲಿ ಹಾಡುಹಗಲೇ ಈ ಕೃತ್ಯವನ್ನು ವೆಸಗಿದ್ದರಿಂದ ಈ ಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಅತಂಕ ಸೃಷ್ಠಿಯಾಗಿತ್ತು.

ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಬೈಕ್ ನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಶ್ರೀ ಹನುಮಂತರಾಯ ರವರ ಮಾರ್ಗದರ್ಶನದಲ್ಲಿ ಎಸಿಪಿ ಸಿಸಿಬಿ ವೆಲೆಂಟೈನ್ ಡಿ ಸೋಜ, ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love