ಕೋಮುವಾದಿಗಳು ಮತ್ತು ಜಾತ್ಯತೀತ ಶಕ್ತಿಗಳ ನಡುವೆ ನಡೆಯುತ್ತಿರುವ ಸಂಘರ್ಷ ಈ ಚುನಾವಣೆ: ಸಿದ್ದರಾಮಯ್ಯ
ಚಿಕ್ಕಮಗಳೂರು: ಕೋಮುವಾದಿಗಳು ಮತ್ತು ಜಾತ್ಯತೀತ ಶಕ್ತಿಗಳ ನಡುವೆ ನಡೆಯುತ್ತಿರುವ ಸಂಘರ್ಷ ಈ ಚುನಾವಣೆ. ಜಗತ್ತಿನ ಗಮನ ಈ ಚುನಾವಣೆ ಕಡೆಗಿದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿ ಪಕ್ಷಗಳ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಿಜೆಪಿಯವರು ಪ್ರಚಾರ ಸಭೆಗಳಲ್ಲಿ ದೇಶದ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಐದು ವರ್ಷಗಳ ಆಡಳಿತದಲ್ಲಿ ಏನು ಮಾಡಿದೆವು ಎಂಬುದನ್ನು ಬಿಜೆಪಿಯವರು ಹೇಳುತ್ತಿಲ್ಲ. 2014ರ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ದೂಷಿಸಿದರು.
‘ಬಿಜೆಪಿ ಸಾಧನೆ ಶೂನ್ಯ ಆಗಿರುವುದರಿಂದ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಕೋಮುವಾದ ಬಿತ್ತುವವರಿಗೆ ಅಧಿಕಾರ ನೀಡಬೇಕಾ’ ಎಂದು ಪ್ರಶ್ನಿಸಿದರು.
ಪ್ರಜಾತಂತ್ರ ಅಪಾಯದಲ್ಲಿದೆ. ಮೋದಿ ಸರ್ಕಾರವು ಚುನಾವಣೆ ಆಯೋಗ, ಆರ್ಬಿಐ, ಸಿಬಿಐ, ಇಡಿ, ಐಟಿಯಂಥ ಸಂವಿಧಾನಾತ್ಮಕ ಸಂಸ್ಥೆಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡು, ದುರುಪಯೋಗ ಮಾಡಿಕೊಂಡಿದೆ’ ಎಂದು ಆರೋಪಿಸಿದರು.
‘ಆದಾಯ ತೆರಿಗೆಯವರು ಕಾಂಗ್ರೆಸ್ ಮತ್ತು ಜೆಡಿಎಸ್ನವರನ್ನು ಹುಡುಕಿ ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಅವರ ಮನೆಗಳ ಮೇಲೆ ಏಕೆ ದಾಳಿ ಮಾಡಿಲ್ಲ? ದಾಳಿಗೆ ನಮ್ಮ ವಿರೋಧ ಇಲ್ಲ, ಆದರೆ ದುರುದ್ದೇಶ ಮತ್ತು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದರೆ ಅದನ್ನು ಖಂಡಿಸಬೇಕು’ ಎಂದು ಹೇಳಿದರು.
‘ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು, ಕೆಲಸ ಕೊಟ್ಟಿಲ್ಲ. ಮೋದಿ ಅವರ ಮಾತಿನ ಮೋಡಿಗೆ ಯವಜನರು ಮರುಳಾಗಬಾರದು. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿದ್ದರು. ಅದು ಸಾಧ್ಯವಾಗಿಲ್ಲ’ ಎಂದು ಕುಟುಕಿದರು.
ಜಿಲ್ಲೆಯ ಕಾಫಿ, ಕಾಳುಮೆಣಸು, ರಬ್ಬರ, ಅಡಿಕೆ, ತೆಂಗು ಬೆಳೆಗಾರರ ಹಿತಕಾಯಲು ಶೋಭಾ ಕರಂದ್ಲಾಜೆ ವಿಫಲರಾಗಿದ್ದಾರೆ. ಸಿ.ಟಿ.ರವಿ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರೂ ಕರಗಡ ನೀರಾವರಿ ಯೋಜನೆ ಪೂರ್ಣಗೊಳಿಸಿಲ್ಲ ಎಂದು ದೂರಿದರು.
‘ರೈತರ ಸಾಲಮನ್ನಾ ಮಾಡಲು ನಮ್ಮ ಬಳಿ ನೋಟು ಪ್ರಿಂಟಿಂಗ್ ಮೆಷಿನ್ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಅವರನ್ನು ರೈತರ ಪರ ಎಂದು ಕರೆಯಬೇಕೇ’ ಎಂದು ಪ್ರಶ್ನಿಸಿದರು.
ಈ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್ನಿಂದ ಸ್ಪರ್ಧಿಸಿರುವ ಪ್ರಮೋದ್ ಮಧ್ವರಾಜ್ ಅವರು ಪ್ರಾಮಾಣಿಕ ರಾಜಕಾರಣಿ. ಹಿಂದೆ ಸಚಿವರಾಗಿದ್ದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರನ್ನು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿ, ‘ಸಿದ್ದರಾಮಯ್ಯ ಮತ್ತು ಎಚ್.ಡಿ.ದೇವೇಗೌಡ ಒಂದಾಗಿರುವುದು ಆನೆ ಬಲ ತಂದಿದೆ. ಈ ಬಾರಿ ಬದಲಾವಣೆಗೆ ಮತದಾರರು ಗಮನ ಹರಿಸಬೇಕು’ ಎಂದು ಕೋರಿದರು.
‘ಚಿಕ್ಕಮಗಳೂರು ಭಾಗದಲ್ಲಿ ಮನೆ ಮಾಡುತ್ತೇನೆ. ಸಮಸ್ಯೆ– ಸಂಕಷ್ಟಗಳನ್ನು ಆಲಿಸುತ್ತೇನೆ. ಮತದಾರರು ನಮಗೆ ಶಕ್ತಿ ತುಂಬಬೇಕು. ಚಿಕ್ಕಮಗಳೂರು– ಉಡುಪಿ ಕ್ಷೇತ್ರವನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರ ಮಾಡಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಮುಖಂಡರಾದ ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ, ಎಚ್.ಎಚ್.ದೇವರಾಜ್, ಗಾಯತ್ರಿ ಶಾಂತೇಗೌಡ, ಸಗೀರ್ ಅಹಮದ್, ಬಿ.ಎಲ್.ಶಂಕರ್, ಎಂ.ಎಲ್.ಮೂರ್ತಿ, ರಂಜನ್ ಅಜಿತ್ಕುಮಾರ್, ಜಿ.ಎಚ್.ಶ್ರೀನಿವಾಸ್, ಡಾ.ಡಿ.ಎಲ್.ವಿಜಯಕುಮಾರ್, ಮೋಟಮ್ಮ, ಎಚ್.ಎಂ.ರೇಣುಕಾರಾಧ್ಯ, ಟಿ.ಎಚ್.ಶಿವಶಂಕರಪ್ಪ, ಮೋಟಮ್ಮ, ನಯನಾ ಮೋಟಮ್ಮ, ಎಂ.ಸಿ.ಶಿವಾನಂದಸ್ವಾಮಿ, ಎ.ಎನ್.ಮಹೇಶ್, ಪಿ.ವಿ.ಲೋಕೇಶ್, ಕೆ.ಮಹಮ್ಮದ್, ಇದ್ದರು.