ಕೋರೆಗಳಿಗೆ ಬೇಲಿ ಹಾಕದಿದ್ದಲ್ಲಿ ಲೈಸೆನ್ಸ್ ರದ್ದು- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಎಚ್ಚರಿಕೆ

Spread the love

ಕೋರೆಗಳಿಗೆ ಬೇಲಿ ಹಾಕದಿದ್ದಲ್ಲಿ ಲೈಸೆನ್ಸ್ ರದ್ದು- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲ್ಲು ಕೋರೆಗಳ ಸುತ್ತ 15 ದಿಗಳ ಒಳಗೆ ಸೂಕ್ತ ಬೇಲಿ ಹಾಕಿದಿದ್ದಲ್ಲಿ ಕೋರೆಗಳಿಗೆ ನೀಡಿರುವ ಲೈಸೆನ್ಸ್ ನ್ನು ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಎಚ್ಚರಿಕೆ ನೀಡಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ , ಮಕ್ಕಳ ರಕ್ಷಣೆ ಹಾಗೂ ಪಾಲನೆಗಾಗಿ ಕಲ್ಲು ಕೋರೆಗಳಿಗೆ ಆವರಣ ಗೋಡೆ ಹಾಕುವ ಕುರಿತು ಕಾರ್ಯಪಡೆಯನ್ನು ರಚಿಸುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿನ ಪರವಾನಗಿ ಇಲ್ಲದ ಕೋರೆಗಳ ಸರ್ವೆ ಮಾಡಿ, ಅವುಗಳನ್ನು ಮುಚ್ಚುವಂತೆ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಈ ಕುರಿತು 2 ದಿನದಲ್ಲಿ ವರದಿ ನೀಡಲು ತಿಳಿಸಿದರು, ಕಲ್ಲು ಕೋರೆಗಳನ್ನು ಪ್ರಸ್ತುತ ಮುಚ್ಚಿದ್ದರೂ ಸಹ ಅವುಗಳನ್ನು ಹಿಂದೆ ನಿರ್ವಹಣೆ ಮಾಡುತ್ತಿದ್ದ ಮಾಲೀಕರೇ ಬೇಲಿ ಹಾಕಬೇಕು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕೋರೆ ಗಳ ಮಾಲೀಕರನ್ನು 15 ದಿನಗಳ ಒಳಗೆ ಸೂಕ್ತ ಬೇಲಿ ಹಾಕದಿದ್ದಲ್ಲಿ ಅವರಿಗೆ ನೀಡಿರುವ ಲೈಸೆನ್ಸ್ ರದ್ದುಗೊಳಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು, ಪಂಚಾಯತ್ ಗಳ ವ್ಯಾಪ್ತಿಯಲ್ಲಿರುವ ಕಲ್ಲು ಕೋರೆ, ಮದಗ, ರಸ್ತೆ ಬದಿಯಲ್ಲಿನ ಅಪಾಯಕಾರಿ ಹೊಂಡಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ, ಒಂದು ವಾರದಲ್ಲಿ ವರದಿ ನೀಡುವಂತೆ ಎಲ್ಲಾ ಪಂಚಾಯತ್ ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಗ್ರಾಮ ಪಂಚಾಯತ್ ಮಟ್ಟದಿಂದ ಕಾರ್ಯ ಪಡೆ ರಚಿಸುವ ಕುರಿತಂತೆ ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು, ಈ ಕುರಿತು ಸಿದ್ದಪಡಿಸಿರುವ ಕರಡು ಪ್ರತಿಯನ್ನು ಪರಿಶೀಲಿಸಿ ಅಭಿಪ್ರಾಯ ತಿಳಿಸುವಂತೆ ಸಮಿತಿಯ ಸದಸ್ಯರಿಗೆ ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ಆರಂಭಿಸುವ ಕುರಿತಂತೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕುಂದಾಪುರ ತಾಲೂಕಿನ ಕೆರಾಡಿ, ಹಕ್ಲಾಡಿ ಮತ್ತು ಗೋಳಿಹೊಳೆ ಸೇರಿದಂತೆ ಹಲವೆಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರು ನೀಡಿದ ದೂರಿಗೆ ಉತ್ತರಿಸಿದ ಅಬಕಾರಿ ಇಲಾಖೆಯ ಡಿಸಿ , ಸರಿಯಾದ ಮಾಹಿತಿಯನ್ನು ಇಲಾಖೆಗೆ ನೀಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love