ಕೋವಿಡ್-19 ; ಉಡುಪಿ ಸೇರಿದಂತೆ 5 ಜಿಲ್ಲೆಗಳ ಡಿಸಿ, ಎಸ್ಪಿ, ಸಿಇಒ ಗಳ ಜೊತೆ ಬಿಎಸ್ ವೈ ವೀಡಿಯೋ ಸಂವಾದ
ಬೆಂಗಳೂರು: ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತ್ಯೇಕವಾಗಿ ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡಿ ಸೋಂಕು ತಡೆ ಪ್ರತಿಬಂಧಕ ಕ್ರಮಗಳನ್ನು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಕೋವಿಡ್ 19 ಸೋಂಕು ನಿಯಂತ್ರಣ ಉದ್ದೇಶದಿಂದ ಕಲಬುರ್ಗಿ, ವಿಜಯಪುರ, ಉಡುಪಿ, ಯಾದಗಿರಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಎಸ್.ಪಿಗಳ ಜತೆ ವೀಡಿಯೋ ಸಂವಾದ ನಡೆಸಿದ ಅವರು, ತಾಲ್ಲೂಕು ಕೇಂದ್ರಗಳಲ್ಲಿಯೇ ಮೊಕ್ಕಾಂ ಹೂಡಿ ಸಮುದಾಯಕ್ಕೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಕೈಗೊಂಡಿರುವ ಕ್ರಮಗಳ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿ ಶ್ರೀ @BSYBJP ಅವರು, ಕೋವಿಡ್19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿ, ವಿಜಯಪುರ, ಉಡುಪಿ, ಯಾದಗಿರಿ, ರಾಯಚೂರು, ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.1/2 pic.twitter.com/vR6BWZ3vys
— CM of Karnataka (@CMofKarnataka) June 2, 2020
ಜೂನ್ 8 ರಿಂದ ಮೊದಲ ಹಂತದ ಅನ್ ಲಾಕ್ ನಿಯಮಗಳು ಜಾರಿಗೆ ಬರುತ್ತಿದ್ದು, ಲಾಕ್ ಡೌನ್ ನಿಂದ ಸಾಕಷ್ಟು ಸಡಲಿಕೆಗಳನ್ನು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಟ್ಟೆಚ್ಚರದಿಂದ ಇದ್ದು, ಕೇಂದ್ರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ವಲಸಿಗರಿಂದ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಿಮಾನ, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶ ನೀಡಿದರು.
ಕೋವಿಡ್ 19 ಪರೀಕ್ಷಾ ಕಿಟ್ ಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಬಾರದು. ಗೃಹ ಬಂಧನ ಅಂದರೆ – ಹೋಮ್ ಕ್ವಾರಂಟೈನ್ ನಲ್ಲಿರುವವರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು. ಪೋಲೀಸ್ ಇಲಾಖೆಯಿಂದ ಗೃಹ ಬಂಧನದಲ್ಲಿರುವವರ ಮನೆಯ ಬಳಿ ಪೇದೆಗಳನ್ನು ನಿಯೋಜಿಸಬೇಕು. ಗ್ರಾಮ ಪಂಚಾಯತ್ ಹಂತದಲ್ಲಿ ರಚನೆಯಾಗಿರುವ ಕಾರ್ಯಪಡೆಗಳು ಗ್ರಾಮ ಮಟ್ಟದಲ್ಲಿ ಕ್ವಾರೆಂಟೈನ್ ನಲ್ಲಿರುವವರ ಬಗ್ಗೆ ಕಟ್ಟೆಚ್ಚರ ವಹಿಸಬೇಕು. ಪಂಚಾಯತ್ ಸದಸ್ಯರಿಗೆ ಈ ಬಗ್ಗೆ ತರಬೇತಿ ನೀಡಲಾಗಿದ್ದು, ಬೂತ್ ಮಟ್ಟದ ತಂಡಗಳು ಪ್ರತಿ ದಿನ ವರದಿ ಸಲ್ಲಿಸುವಂತೆ ನೋಡಿಕೊಳ್ಳಬೇಕು ಎಂದು ಯಡಿಯೂರಪ್ಪ ಸೂಚಿಸಿದರು.
ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ವಾರ್ಡ್ ಮಟ್ಟದಲ್ಲಿ ಕಾವಲು ಸಮಿತಿಗಳನ್ನು ರಚಿಸಬೇಕು. ಈ ಸಮಿತಿಗಳು ಕ್ರಿಯಾಶೀಲವಾಗಿದ್ದು, ಹೋಮ್ ಕ್ವಾರಂಟೈನ್ ಉಲ್ಲಂಘನೆಯಾದರೆ ಎಫ್.ಐ.ಆರ್ ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.
ಗಡಿ ಭಾಗಗಳಿರುವ ಜಿಲ್ಲೆಗಳು ಕಟ್ಟುನಿಟ್ಟಾಗಿ ಗಡಿ ಪ್ರದೇಶಗಳನ್ನು ಕಾಯ್ದು, ಅಕ್ರಮ ಪ್ರವೇಶ ತಡೆಯಬೇಕು. ಮೃತ ದೇಹಗಳನ್ನು ಯಾವುದೇ ಕಾರಣಕ್ಕೂ ರಾಜ್ಯದೊಳಗೆ ತರದಂತೆ ನೋಡಿಕೊಳ್ಳಬೇಕು. ಬೇರೆ ರಾಜ್ಯದಿಂದ ಸೋಂಕು ಹರಡದಂತೆ ಅಹೋರಾತ್ರಿ ಕಣ್ಗಾವಲು ಹಾಕಬೇಕು ಎಂದರು.
ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪರೀಕ್ಷಾ ದಿನಾಂಕಗಳು ನಿಗದಿಯಾಗಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಕ್ರಮ ವಹಿಸಬೇಕು. ಪರೀಕ್ಷೆಗೆ ತೊಂದರೆಯಾಗದಂತೆ, ಸೋಂಕು ಪಸರಿಸದಂತೆ ನೋಡಿಕೊಳ್ಳಬೇಕು ಎಂದು ಯಡಿಯೂರಪ್ಪ ಆದೇಶಿಸಿದರು.
ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ ಅಖ್ತರ್ ಹಾಗೂ ಆರೋಗ್ಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಉಪಸ್ಥಿತರಿದ್ದರು.