ಕೋವಿಡ್ 19: ಮಾರ್ಚ್ 28 ದಕ ಜಿಲ್ಲೆ ಸಂಪೂರ್ಣ ಬಂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 7 ಪ್ರಕರಣಗಳು ವರದಿಯಯಾಗಿದ್ದು ನೆರೆಯ ಕಾಸರಗೋಡು, ಉತ್ತರಕನ್ನಡ ಜಿಲ್ಲೆಗಳಲ್ಲೂ ಕರೋನಾ ಪಾಸಿಟಿವ್ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 28ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 7 ಪ್ರಕರಣಗಳು ವರದಿಯಾಗಿವೆ. ನೆರೆಯ ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಕರೋನಾ ಪಾಸಿಟಿವ್ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿವೆ. ಜಿಲ್ಲೆಯಲ್ಲಿ ಸಾರ್ವಜನಿಕ ಓಡಾಟ ನಿರ್ಬಂದಿಸದಿದ್ದರೆ, ಮುಂದಿನ ದಿನಗಳು ಇನ್ನಷ್ಟು ಅಪಾಯಕಾರಿಯಾಗಿವೆ. ಜನರ ಉತ್ತಮ ಭವಿಷ್ಯಕ್ಕಾಗಿ ಕೈಗೊಳ್ಳುವ ಈ ನಿರ್ಧಾರವನ್ನು ಎಲ್ಲರೂ ಬೆಂಬಲಿಸಬೇಕು. ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಿದೆ. ಪ್ರತಿಯೊಬ್ಬರೂ ಮನೆಯೊಳಗೆ ಕೂತು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಎಲ್ಲಾ ಚಟುವಟಿಕೆ, ವಾಣಿಜ್ಯ ವ್ಯವಹಾರಗಳನ್ನು, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ