ಕೋವಿಡ್-19: ಮೃತರ ಅಂತ್ಯಕ್ರಿಯೆ ನಿಯಮಗಳಲ್ಲಿ ತಿದ್ದುಪಡಿ ಕೋರಿ ಮುಖ್ಯಮಂತ್ರಿಗೆ ಮನವಿ
ರಾಜ್ಯ ಸರಕಾರವು ಹಂತ ಹಂತವಾಗಿ ಕೊವಿಡ್-19 ನಿರ್ವಹಣೆಯ ನಿಯಮಗಳಲ್ಲಿ ಹಲವು ತಿದ್ದುಪಡಿಗಳನ್ನು ಈಗಾಗಲೇ ಮಾಡಿದ್ದು, ಕೂಡಲೇ ತಜ್ಞ ವೈದ್ಯರು ಮತ್ತು ಹಿರಿಯ ವಿಜ್ಞಾನಿಗಳ ತುರ್ತು ಸಲಹೆ ಪಡೆದು ಕೊರೊನ ಸೋಂಕಿನಿಂದ ಮೃತರಾಗುವವರ ಅಂತ್ಯಕ್ರಿಯೆಯ ನಿಯಮಗಳಲ್ಲೂ ತಿದ್ದುಪಡಿಗಳನ್ನು ಮಾಡಬೇಕು ಹಾಗೂ ಎಲ್ಲ ವರ್ಗದ ಜನರೂ ಅವರವರ ಸಂಸ್ಕøತಿ, ಸಂಪ್ರದಾಯದಂತೆ ಮೃತರ ಅಂತ್ಯಕ್ರಿಯೆ (ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ) ನಡೆಸುವಂತಾಗಬೇಕು. ತನ್ಮೂಲಕ ಅನಗತ್ಯ ಭಯದಲ್ಲಿರುವ ರಾಜ್ಯದ ಜನತೆಗೆ ಆತ್ಮವಿಶ್ವಾಸ ತುಂಬಿ, ಸಾಂತ್ವನ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಉಮರ್ ಯು.ಹೆಚ್. ರಾಜ್ಯದ ಮುಖ್ಯಮಂತ್ರಿಯವರಲ್ಲಿ ಮನವಿ ಸಲ್ಲಿಸಿದ್ದಾರೆ.
ಕೊರೊನ ಸೋಂಕಿತರಾಗಿ ಮೃತರಾಗುವವರ ಶರೀರದಲ್ಲಿ ವೈರಾಣುಗಳು ಜೀವಂತವಾಗಿರುವುದಿಲ್ಲ ಎಂಬುದು ಹಲವು ವಿಜ್ಞಾನಿಗಳು ಮತ್ತು ಹಿರಿಯ ವೈದ್ಯರ ಅಭಿಮತವಾಗಿದೆ. ಮೃತ ದೇಹವನ್ನು ಪ್ಲಾಸ್ಟಿಕ್ ಹಾಳೆಯಿಂದಲೇ ಸುತ್ತುವ ಅಗತ್ಯವಿಲ್ಲ, ಬಟ್ಟೆಯಲ್ಲಿ ಸುತ್ತಿದರೂ ಸಾಕಾಗುತ್ತೆ ಹಾಗೂ ದಹನ ಅಥವಾ ದಫನದ ಬಳಿಕ ವೈರಾಣು ಹರಡುವುದಿಲ್ಲ ಎಂಬ ಅಭಿಪ್ರಾಯಗಳೂ ತಜ್ಞರದ್ದಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿತರು ಮತ್ತು ಮೃತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕ ಮನೆ ಮಾಡಿದೆ. ಕರ್ನಾಟಕವು ಹಲವು ಧರ್ಮ, ಭಾಷೆ, ಸಂಸ್ಕøತಿ, ಸಂಪ್ರದಾಯ, ಆಚರಣೆಗಳಿರುವ ಬಹುಸಂಸ್ಕøತಿಯ ರಾಜ್ಯ. ಮೃತರಾದವರಿಗೆ ಅಂತಿಮ ನಮನ ಸಲ್ಲಿಸಿ, ಗೌರವಪೂರ್ಣ ಅಂತ್ಯಕ್ರಿಯೆ ನಡೆಸುವುದು ನಮ್ಮ ಸಂಸ್ಕøತಿ. ಆದರೆ, ಸರಕಾರದ ನಿಯಮಗಳಿಂದಾಗಿ ಕೋವಿಡ್-19 ಸೋಂಕಿತರಾಗಿ ಮೃತರಾದವರ ದಹನ ಅಥವಾ ದಫನ ಕ್ರಿಯೆಗಳು ನಮ್ಮ ಸಂಸ್ಕøತಿ, ಸಂಪ್ರದಾಯದಂತೆ ನಡೆಸಲು ಸಾಧ್ಯವಾಗದಿರುವುದು ಮೃತರ ಕುಟುಂಬ, ಬಂಧು ಮಿತ್ರರಲ್ಲಿ ಮರಣ ವಾರ್ತೆಗಿಂತಲೂ ಹೆಚ್ಚು ನೋವು ಮತ್ತು ಸಂಕಟಕ್ಕೆ ಕಾರಣವಾಗುತ್ತಿದೆ. ಸಮಾಜದಲ್ಲಿ ಅನಗತ್ಯ ಭಯ ಹುಟ್ಟು ಹಾಕುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಕೊರೊನ ಸೋಂಕು ಹರಡದಂತೆ ತಡೆಯುವ ಜನಜಾಗೃತಿ, ಶಂಕಿತರ ತಪಾಸಣೆ ಹಾಗೂ ರೋಗಿಗಳ ಚಿಕಿತ್ಸೆಗೆ ಸೂಕ್ತ ತುರ್ತು ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರ ಪ್ರೀತಿ, ವಿಶ್ವಾಸ, ಗೌರವಗಳಿಗೆ ಪಾತ್ರರಾಗಿರುವ ರಾಜ್ಯದ ಮುಖ್ಯಮಂತ್ರಿಯವರಿಗೆ ಉಮರ್ ಯು.ಹೆಚ್. ಕೃತಜ್ಞತೆ ಸಲ್ಲಿಸಿದ್ದಾರೆ. ಮನವಿಯ ಯಥಾಪ್ರತಿಗಳನ್ನು ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ.