ಕೋವಿಡ್ ರೋಗಿಗಳನ್ನು ವಾಪಾಸ್ ಕಳುಹಿಸುವಂತಿಲ್ಲ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಕೋಟ ನಿರ್ದೇಶನ

Spread the love

ಕೋವಿಡ್ ರೋಗಿಗಳನ್ನು ವಾಪಾಸ್ ಕಳುಹಿಸುವಂತಿಲ್ಲ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಕೋಟ ನಿರ್ದೇಶನ

ಮಂಗಳೂರು : ಖಾಸಗೀ ಆಸ್ಪತ್ರೆಗಳು ತಮ್ಮಲ್ಲಿಗೆ ಬಂದ ಕೋರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡದೆ ಯಾವುದೇ ಕಾರಣಕ್ಕೂ ವಾಪಾಸು ಕಳುಹಿಸುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಅವರು ಸೋಮವಾರ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಕೋರೋನಾ ರೋಗಿಗಳ ನಿರ್ವಹಣೆ ಕುರಿತು ಸಭೆ ನಡೆಸಿ, ಬಳಿಕ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದೆ. ಹೀಗಿರುವಾಗ, ಕೋವಿಡ್ ಸೋಂಕಿತರು ಅಥವಾ ಇತರೆ ಯಾವುದೇ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಲೆದಾಡುವುದನ್ನು ಸರಕಾರ ಸಹಿಸುವುದಿಲ್ಲ. ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಪ್ರವೇಶ ನೀಡಲು ನಿರಾಕರಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಖಾಸಗೀ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲೇಬೇಕಾಗಿದೆ ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

ಈಗಾಗಲೇ ಮುಖ್ಯಮಂತ್ರಿಗಳು ಕೋವಿಡ್ ಸೊಂಕಿತರಿಗೆ ಖಾಸಗೀ ಆಸ್ಪತ್ರೆಗಳು ಚಿಕಿತ್ಸೆ ನೀಡುವ ಬಗ್ಗೆ ಸ್ಪಷ್ಟವಾದ ನಿರ್ದೇಶನ ನೀಡಿದ್ದಾರೆ. ಎಲ್ಲಾ ಆಸ್ಪತ್ರೆಗಳಲ್ಲಿ ಶೇಕಡಾ 50 ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲು ಆದೇಶಿಸಲಾಗಿದೆ. ಸೋಂಕಿತ ರೋಗಿಗಳು ಆಸ್ಪತ್ರೆ ಪ್ರವೇಶಕ್ಕಾಗಿ ಅಲೆದಾಡುವುದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಅವರು ಕಟ್ಟುನಿಟ್ಟಾಗಿ ತಿಳಿಸಿದರು.

ರೋಗಿಗಳ ಹಣಕಾಸು ಸಾಮಥ್ರ್ಯವನ್ನು ಖಾಸಗೀ ಆಸ್ಪತ್ರೆಗಳು ಪರಿಗಣಿಸುವಂತಿಲ್ಲ. ಬಿಪಿಎಲ್ ಅಥವಾ ಎಪಿಎಲ್ ಸೇರಿದಂತೆ ಚಿಕಿತ್ಸೆಗೆ ಬರುವ ಜನಸಾಮಾನ್ಯರಿಗೆ ಆಯುಷ್ಮಾನ್ ಯೋಜನೆ ಜತೆ ಸಂಯೋಜಿಸಿ ಸರಕಾರ ನಿಗದಿಪಡಿಸಿದ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಪ್ರತೀ ಆಸ್ಪತ್ರೆಯಲ್ಲಿರುವ ಕೋವಿಡ್ ಸೋಂಕಿತ ರೋಗಿಗಳ ನಿರ್ವಹಣೆಯ ಮೇಲೆ ನಿಗಾ ಇಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಖಾಸಗೀ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಕಡಿಮೆ ವೆಚ್ಚದ ವೆಂಟಿಲೇಟರ್ಗಳನ್ನು ಪೂರೈಸುವ ಬಗ್ಗೆ ಪರಿಶೀಲನೆ ನಡೆಸಲು ಸಚಿವರು ಆರೋಗ್ಯ ಇಲಾಖೆಗೆ ಸೂಚಿಸಿದರು. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಗೆ 25000 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಹಾಗೂ 50 ವೆಂಟಿಲೇಟರ್ಗಳ ಪೂರೈಕೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಜಿಲ್ಲೆಗೆ ಪೂರೈಕೆಯಾಗಲಿದೆ. ಕೋರೋನಾ ಬಾಧಿತ ಆರೋಪಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಕ್ರಮ ಜರುಗಿಸಲಾಗಿದೆ ಎಂದು ಸಚಿವರು ಹೇಳಿದರು.

ತಾಲೂಕುಗಳಲ್ಲಿಯೂ ಕೋವಿಡ್ ಕೇಂದ್ರ: ಸಂಸದ
ಜಿಲ್ಲೆಯ ಇತರೆ ತಾಲೂಕು ಕೇಂದ್ರಗಳಲ್ಲಿಯೂ ಕೋವಿಡ್ ಸೋಂಕಿತರಿಗೆ ಕೇರ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲು ಸೂಚಿಸಿದ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ರೋಗಲಕ್ಷಣಗಳಿಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ರಾಜ್ಯ ಸರಕಾರ ಅವಕಾಶ ನೀಡಿರುವುದರಿಂದ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕ ವಂ| ರಿಚರ್ಡ್ ಕುವೆಲ್ಲೊ ಅವರು ಮಾತನಾಡಿ, ತಮ್ಮ ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರದ ಎಲ್ಲಾ ನಿರ್ದೇಶನಗಳನ್ನು ಪೂರ್ಣವಾಗಿ ಅನುಸರಿಸಲಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತ್ನಾಕರ್, ಆಸ್ಪತ್ರೆ ಆಡಳಿತಾಧಿಕಾರಿ ವಂ| ರುಡಾಲ್ಫ್ ರವಿ ಡೇಸಾ ಮತ್ತಿತರರು ಇದ್ದರು.


Spread the love