ಕ್ರಾಂತಿಕಾರಿ, ಅಭಿವೃದ್ಧಿಗೆ ಪೂರಕವಾದ ಜನಪ್ರಿಯ ಕೇಂದ್ರ ಬಜೆಟ್ – ಮಟ್ಟಾರ್ ರತ್ನಾಕರ ಹೆಗ್ಡೆ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಇವರು ಮಂಡಿಸಿದ 2018-19ರ ಸಾಲಿನ ಬಜೆಟ್ ಕ್ರಾಂತಿಕಾರಿ, ಅಭಿವೃದ್ಧಿಗೆ ಪೂರಕಾವಾದ ಜನಪ್ರಿಯ ಬಜೆಟ್ ಇದಾಗಿದೆ ಎಂದು ಬಜೆಟ್ ಬಗ್ಗೆ ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾಗಿರುವ ಮಟ್ಟಾರ್ ರತ್ನಾಕರ ಹೆಗ್ಡೆಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬಜೆಟ್ನ್ನು ವಿಶ್ಲೇಷಿಸಿದ ಅವರು ಎಪ್ಪತ್ತು ಲಕ್ಷ ಯುವಕರಿಗೆ ಹೊಸ ಉದ್ಯೊಗ, ಕೃಷಿಗೆ 11 ಲಕ್ಷ ಕೋಟಿ, ಹೈನುಗಾರಿಕೆ, ಕೃಷಿ, ಮೀನುಗಾರಿಕೆಗೆ ಉತ್ತೇಜನ, 22 ಸಾವಿರ ಎ.ಪಿ.ಎಂ.ಸಿಗಳ ಗುರುತಿಸುವಿಕೆ 11 ಲಕ್ಷ ಕೋಟಿ ಸಾಲದ ಗುರಿ, 4 ಕೋಟಿ ಜನರಿಗೆ ಉಚಿತ ವಿದ್ಯುತ್, 8 ಕೋಟಿ ಜನರಿಗೆ ಉಚಿತ ಎಲ್.ಪಿ.ಜಿ, ಸ್ಟ್ಯಾಂಪ್ ಡ್ಯೂಟಿ ಚಾರಿತ್ರಿಕ ಬದಲಾವಣೆ, 5 ಲಕ್ಷದವರೆಗೆ ಉಚಿತ ವೈದ್ಯಕೀಯ ಸವಲತ್ತು, 600 ರೈಲ್ವೇ ನಿಲ್ದಾಣ ಆಧುನೀಕರಣ, ಬೆಂಗಳೂರಿಗೆ ಮೋನೋರೈಲ್ ನೀಡಿದ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಮಟ್ಟಾರ್ ರವರು ಹೇಳಿದ್ದಾರೆ.
ಶೋಷಿತರ, ಜನ ಸಾಮಾನ್ಯರ ಬಜೆಟ್ : ಕಟಪಾಡಿ ಶಂಕರ ಪೂಜಾರಿ
ಕೇಂದ್ರದ ಈ ಬಾರಿಯ ಬಜೆಟ್ ಶೋಷಿತ, ದುಡಿಯುವ ವರ್ಗ ಜನ ಸಾಮಾನ್ಯರ ಬಜೆಟ್ ಎಂದು ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಕಟಪಾಡಿ ಶಂಕರ ಪೂಜಾರಿ ಹೇಳಿದ್ದಾರೆ.
ವೈಯಕ್ತಿಕ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಮುಂದುವರಿಸಲಾಗಿದೆ. ಇದರಿಂದ ದುಡಿಯುವ ಮತ್ತು ಮಧ್ಯಮ ವರ್ಗದ ಜನ ಸಮುದಾಯಕ್ಕೆ ಅನುಕೂಲವಾಗಿದೆ. ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಆರೋಗ್ಯ ವಿಮೆ, ಬಡವರಿಗೆ ಉಜ್ವಲ ಯೋಜನೆ ವಿಸ್ತರಣೆ, ಮಹಿಳೆಯರ ಸ್ತ್ರೀಶಕ್ತಿ ಸಂಘಗಳಿಗೆ ಸಹಾಯಧನ, ಹಿರಿಯ ನಾಗರಿಕರಿಗೆ ಕೊಡುಗೆ ನೀಡಲಾಗಿದೆ. ರೈತಾಪಿ ವರ್ಗಕ್ಕೆ ಬೆಂಬಲ ಬೆಲೆ ಘೋಷಿಸಲಾಗಿದೆ. ಸಹಕಾರ ಸಂಘಗಳನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಉದ್ಯೋಗ ಸೃಷ್ಟಿಗೆ ಆಧ್ಯತೆ ನೀಡಲಾಗಿದೆ. ಕೃಷಿ ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಹೀಗೆ ಆಧ್ಯತಾ ವಲಯಗಳಿಗೆ ಉತ್ತೇಜನ ನೀಡಿದ ಬಜೆಟ್ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ ಎಂದು ಅವರು ತಿಳಿಸಿದ್ದಾರೆ.