ಕ್ರಿಶ್ಚಿಯನ್ ಸಮುದಾಯದವರ ಅಭಿವೃದ್ಧಿಗಾಗಿ ರೂ. 125 ಕೋಟಿ ಮೀಸಲು : ಐವನ್ ಡಿಸೋಜಾ
ಕಲಬುರಗಿ: ಕ್ರೈಸ್ತ ಸಮುದಾಯದವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 2016-17ನೇ ಸಾಲಿನ ಆಯವ್ಯಯದಲ್ಲಿ 125 ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸದಸ್ಯ ಐವನ್ ಡಿಸೋಜಾ ಎಂದು ಹೇಳಿದರು.
ಅವರು ಸೋಮವಾರ ಕಲಬುರಗಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕ್ರೈಸ್ತ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳ ಕುರಿತು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಂಧ್ರಪ್ರದೇಶ ಮತ್ತು ತಮೀಳುನಾಡು ರಾಜ್ಯಗಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಎಲ್ಲ ಕ್ರೈಸ್ತ ಸಮುದಾಯದವರ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಸಲು ತಾವು ವಿಶೇಷ ಆದ್ಯತೆ ನೀಡಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕ್ರೈಸ್ತ ಸಮುದಾಯದದ ಜನರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಕುರಿತು ಕ್ರೈಸ್ತ ಸಮುದಾಯವಿರುವ ಪ್ರತಿಯೊಂದು ಚರ್ಚ್, ಶಾಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಈ ಯೋಜನೆಗಳ ಸದುಪಯೋಗ ಪಡೆಯಲು ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಫಲಾನುಭವಿಗಳು ನೇರವಾಗಿ ಇದರ ಲಾಭ ಪಡೆಯುವಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಹಸಿವು ಮುಕ್ತ ರಾಜ್ಯ ನಿರ್ಮಾಣ ಮಾಡುವುದು ಮುಖ್ಯಮಂತ್ರಿಗಳ ಆಶಯವಾಗಿದೆ. ಈ ಸರ್ಕಾರವು ಕ್ರೈಸ್ತ ಸಮುದಾಯದ ಪರವಾಗಿದ್ದು, ಈ ಸಮುದಾಯ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕಲ್ಲದೇ ನಿಷ್ಠಾವಂತ ಅಧಿಕಾರಿಗಳಾಗಿ ಹೊರ ಹೊಮ್ಮಬೇಕು. ಈ ಸಮುದಾಯವು ಶಿಸ್ತುಬದ್ಧವಾದ ಸಮುದಾಯವಾಗಿದ್ದು, ಶಿಕ್ಷಣದಿಂದ ಮಾತ್ರ ಮುಂದೆ ಬರಲು ಸಾಧ್ಯ ಎಂದರು.
ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸಮುದಾಯ ಭವನಗಳ ನಿರ್ಮಾಣ, ಚರ್ಚುಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಸಹಾಯಧನ ಹಾಗೂ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳ ಮೂಲ ಸೌಕರ್ಯಗಳಿಗೆ ಅನುದಾನ, ವಿದ್ಯಾಸಿರಿ, ಬಿದಾಯಿ, ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ವಿವಿಧ ತರಬೇತಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಸರ್ಕಾರವು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಮತ್ತಿತರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಅಮರನಾಥ ಪಾಟೀಲ್ ಮಾತನಾಡಿ, ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತೆ ಎಲ್ಲ ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.
ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಮೆಹಬೂಬ ಪಾಷಾ ಕಾರಟಗಿ ಅವರು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಇರುವ ಯೋಜನೆಗಳ ಕುರಿತು ವಿವರಿಸಿದರು.
ಬಿಷಪ್ ಮೈಕಲ್ ಮಿರಿಂದಾ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಕಲಬುರಗಿಯಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಕ್ರೈಸ್ತ ಜನರಿದ್ದು, ಅವರಲ್ಲಿ ವಿದ್ಯಾಭ್ಯಾಸದ ಕೊರತೆಯಿಂದ ವಿವಿಧ ಸೌಲಭ್ಯದ ಬಗ್ಗೆ ಪಡೆಯುವ ಬಗ್ಗೆ ಅರಿವು ಇಲ್ಲ. ಅಧಿಕಾರಿಗಳು ಏರ್ಪಡಿಸಿರುವ ಈ ಅರಿವು ಕಾರ್ಯಕ್ರಮವನ್ನು ಎಲ್ಲ ತಾಲೂಕುಗಳಲ್ಲಿ ಏರ್ಪಡಿಸಿ ಅವರಿಗೆ ಎಲ್ಲ ಸೌಲಭ್ಯ ಸಿಗುವಂತೆ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಜಿ.ಜಿ. ಪಾಟೀಲ್, ಸಿಡಿಸಿ ಸದಸ್ಯ ಡಾ|| ಅನಿಲ ರೆಡಸನ್, ಭಾಸ್ಕರನ್ ಚಂದ್ರನ್ ಹಾಗೂ ಸಿಮಿಯೋನ ಸಾಮುವೇಲ್ ಇದ್ದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರು ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರು ಕ್ರಿಶ್ಚಿಯನ್ ಸಮುದಾಯದವರ ಅಹವಾಲುಗಳನ್ನು ಆಲಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸಾಲೋಮನ್ ದಿವಾಕರ ಕಾರ್ಯಕ್ರಮ ನಿರ್ವಹಿಸಿದರು. ಹಿರಿಗೌಡರ ವಂದಿಸಿದರು.
ಕ್ರೈಸ್ತ ಸಮುದಾಯದ ಶ್ರೇಯೋಭಿವೃದ್ಧಿ ಇನ್ನೂ 100 ಕೋಟಿ ರೂ. ಒದಗಿಸಲು ಮನವಿ
ಕ್ರೈಸ್ತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಈಗ ಬಿಡುಗಡೆಯಾಗಿರುವ 125 ಕೋಟಿ ರೂ. ಅನುದಾನದೊಂದಿಗೆ ಹೆಚ್ಚುವರಿಯಾಗಿ ಇನ್ನೂ 100 ಕೋಟಿ ರೂ. ಅನುದಾನ ನೀಡಲು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸದಸ್ಯ ಐವನ್ ಡಿಸೋಜಾ ಎಂದು ಸೋಮವಾರ ಕಲಬುರಗಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅವರು ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ 300 ಕೋಟಿ ರೂ. ಅನುದಾನದೊಂದಿಗೆ ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆ ಹಾಗೂ ರಾಜ್ಯದಾದ್ಯಂತ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವ ಬಗ್ಗೆ 2017-18ನೇ ಸಾಲಿನ ಆಯವ್ಯಯದಲ್ಲಿ ಪ್ರಕಟಿಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು. ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಬದಲಾಗಿ ಆಂಧ್ರ ಮತ್ತು ತಮೀಳುನಾಡು ರಾಜ್ಯಗಳಲ್ಲಿನಂತೆ ಇಲ್ಲಿಯೂ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯಿದೆ ಎಂದರು.
ತಾವು ಈ ಹಿಂದೆ ಆರು ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಪುನ: ಐದು ಜಿಲ್ಲೆಗಳ ಪ್ರವಾಸ ಕೈಗೊಂಡು ಸರ್ಕಾರ ಕ್ರೈಸ್ತ ಸಮುದಾಯದವರಿಗಾಗಿ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಬೀದರ ಜಿಲ್ಲೆಯ 122 ಚರ್ಚ್ಗಳ ದುರಸ್ತಿ ಮತ್ತು ನವೀಕರಣಕ್ಕೆ 15 ಕೋಟಿ ರೂ. ಹಾಗೂ ಕಲಬುರಗಿ ಜಿಲ್ಲೆಯ ಚರ್ಚ್ಗಳ ದುರಸ್ತಿ ಮತ್ತು ನವೀಕರಣಕ್ಕೆ 1.24 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ. ಅದೇ ರೀತಿ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಬೀದರ ಜಿಲ್ಲೆಗೆ 12 ಕೋಟಿ ರೂ. ಹಾಗೂ ಕಲಬುರಗಿ ಜಿಲ್ಲೆಗೆ 2.54 ಕೋಟಿ ರೂ. ಒದಗಿಸಲಾಗಿದೆ. ಸರ್ಕಾರದಿಂದ ನೀಡಲಾದ ಅನುದಾನ ದುರುಪಯೋಗದ ಬಗ್ಗೆ ದೂರುಗಳ ಬಗ್ಗೆ ಜಿಲ್ಲಾ ಮಟ್ಟದ ಅಲ್ಪಸಂಖ್ಯಾತರ ಅಧಿಕಾರಿಗಳು ವಿಚಾರಣೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದರು.
ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ತಿನ ಸದಸ್ಯರಾದ ಡಾ|| ಅನೀಲ ರೆಡ್ಸನ್, ಭಾಸ್ಕರನ್ ಚಂದ್ರನ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ಹಾಜರಿದ್ದರು.