ಕ್ರಿಸ್ಮಸ್-2019: ಪ್ರತಿ ವ್ಯಕ್ತಿಯು ದೇವರು ನಮ್ಮ ನಡುವೆ ಇಟ್ಟಿರುವ ಬೆಲೆಬಾಳುವ ನಿಧಿ – ಬಿಷಪ್ ಪೀಟರ್ ಪಾವ್ಲ್
ಮಂಗಳೂರು: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಪೀಟರ್ ಪಾವ್ಲ್ ಸಲ್ಡಾನಾ ಅವರು ನಾಡಿನ ಜನತೆ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ.
ಸೋಮವಾರ ಮಂಗಳೂರಿನ ಧರ್ಮಾಧ್ಯಕ್ಷರ ನಿವಾಸದಲ್ಲಿ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಆಚರಣೆ ನಡೆಸಿ ಸಂದೇಶ ನೀಡಿದರು
ದೇವರ ಪುತ್ರರಾದ ಯೇಸು ಕಂದ, ಬಡತನ, ಧೀನತೆ ಮತ್ತು ಸ್ವತ್ಯಾಗದಲ್ಲಿ ಜನಿಸಿದರು. ಗೋದಲಿಯಲ್ಲಿ ಜೋಸೆಫ್ ಮತ್ತು ಮರಿಯ ಅವರೊಡನೆ ಯೇಸು ಕಂದನ ಮೂರ್ತಿಯನ್ನಿಟ್ಟಾಗ ಎಲ್ಲವೂ ಅರ್ಥಭರಿತವಾಗುತ್ತದೆ, ಜೀವ ತುಂಬಿದಂತಾಗುತ್ತದೆ, ಎಲ್ಲವೂ ಮಹತ್ವದ್ದಾಗುತ್ತದೆ. ಯೇಸುವನ್ನು ಅಲ್ಲಿಂದ ತೆಗೆದಾಗ ಅದು ಕೇವಲ ಒಂದು ಗ್ರಾಮೀಣ ಬದುಕಿನ ಚಿತ್ರಣವಾಗುತ್ತದೆ. ಯೇಸುವು ನಮ್ಮ ಜೀವನಕ್ಕೆ ಮತ್ತು ಸುತ್ತಮುತ್ತಲಿಗೆ ಅರ್ಥ ತುಂಬುವವರಾಗುತ್ತಾರೆ.
ಯೇಸು ಕ್ರಿಸ್ತರು ಜನಿಸಿದ ಆ ಕಾಲದಲ್ಲಿ ರೋಮನ್ನರು ಸಾಮಾನ್ಯ ಬಡ ಜನರ ವಿರುದ್ಧ ಎಲ್ಲಾ ರೀತಿಯ ಬಲ ಪ್ರಯೋಗ ಮಾಡುತ್ತಿದ್ದರು ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಅವರನ್ನು ಕೊಲ್ಲುತ್ತಿದ್ದರು. ಶೋಷಣೆಯು ಎಷ್ಟು ಬೆಳೆದಿತ್ತೆಂದರೆ ಜನರು ಹೊರಬರಲಾರದಂತಹ ಕೊಳವೆಯೊಳಗೆ ಜೀವಿಸಿದ್ದಂತಿತ್ತು. ಅಂದಿನ ವಾಸ್ತವಿಕ ಕತ್ತಲೆಯಲ್ಲಿ ಹೊಸ ಭರವಸೆ ತುಂಬಲು ಮತ್ತು ಹೊರದಬ್ಬಲ್ಪಟ್ಟವರು ಹಾಗೂ ಶೋಷಿತರು ಘನತೆಯಿಂದ ಜೀವಿಸಲು ಅನುವು ಮಾಡಿಕೊಡಲು ಯೇಸು ಜನಿಸಿದರು. ಯೇಸುವಿನಲ್ಲಿ ಮಾನವನ ಜೀವನವು ನಿಜ ಅರ್ಥ ಮತ್ತು ಅಭಿವೃದ್ಧಿಯನ್ನು ಹುಡುಕುವತ್ತ ಸಾಗುತ್ತದೆ. ಅವರು ಕಟ್ಟಕಡೆಯ ವ್ಯಕ್ತಿಯ ಮಿತ್ರರಾಗುತ್ತಾರೆ. ಯೇಸುವು ನಿಜವಾಗಿ ಪ್ರಪಂಚವನ್ನು ಬೆಳಗಿಸುವ ನಕ್ಷತ್ರ.
ಪ್ರತಿ ವ್ಯಕ್ತಿಯ ನಿಜವಾದ ಘನತೆಯು ಯೇಸುವಿನ ವ್ಯಕ್ತಿತ್ವದಲ್ಲಿ ಪ್ರಜ್ವಲಿಸುತ್ತದೆ ಎಂದು ಕ್ರಿಸ್ತ ವಿಶ್ವಾಸಿಗಳು ನಂಬುತ್ತಾರೆ. ಆಕೆಗೆ ಜನಿಸಲಿರುವ ಕಂದನು ದೇವರ ಪುತ್ರನೆಂದು ದೇವದೂತ ಗಬ್ರಿಯೇಲನು ಮರಿಯಮ್ಮರಿಗೆ ಶುಭ ಸಂದೇಶವನ್ನಿತ್ತನು. ದೇವರು ಮಾನವನಾಗಲು ಮತ್ತು ಮಾನವನಾಗುವಿಕೆಯನ್ನೇ ಆರಿಸಿದ್ದೆಂದಾರೆ ಪ್ರತಿ ವ್ಯಕ್ತಿಯೂ ಆ ದೇವರ ನಿಜವಾದ ಪ್ರತಿರೂಪ. ಪ್ರತಿ ಮಗುವೂ, ಗರ್ಭದೊಳಗಿರಲಿ- ಹೊರಗಿರಲಿ, ಅಥವಾ ಬೆಳೆದ ವ್ಯಕ್ತಿಯಾಗಿರಲಿ ಅಥವಾ ಮರಣಕ್ಕೆ ಸಮೀಪಿಸಿದ್ದಿರಲಿ, ಆತನಲ್ಲಿ ಬೇರ್ಪಡಿಸಲಾಗದಂತಹ ಘನತೆ ಮತ್ತು ಹಕ್ಕು ಇರುವುದು. ಯೇಸುವಿನೊಡನೆ, ದೇವರು ಕೇವಲ ಒಂದು ಕಲ್ಪನೆಯಲ್ಲ; ಆತನ ಜನನದ ಪವಾಡದ ಮೂಲಕ, ದೇವರು ತಾನು ಬೌತಿಕ ಪ್ರಪಂಚದಲ್ಲಿ ಬೆರೆತಿರುವುದುದಾಗಿ ತೋರ್ಪಡಿಸುತ್ತಾರೆ. ಅವರಿಗೆ ನಮ್ಮ ಪ್ರತಿಯೊಬ್ಬರ ವಿಚಾರವಾಗಿ ಕಾಳಜಿಯಿದೆ. ಕನ್ಯಾಮರಿಯಮ್ಮನವರಲ್ಲಿ ಜನಿಸುವುದರ ಮೂಲಕ ಅವರು ಒಂದು ಹೊಸ ಸೃಷ್ಟಿಯನ್ನು ಆರಂಭಿಸಿದ್ದಾರೆ.
ಹೀಗಿರಲು, ಯಾವುದೇ ಹಂತದಲ್ಲಿರುವ ಮನುಷ್ಯ ಜೀವವನ್ನು ಗೌರವಿಸೋಣ. ಜೀವವನ್ನು ತಡೆಯುವುದು ಬೇಡ; ಅದನ್ನು ಬೆಳೆಯಲು ಬಿಡೋಣ. ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಗರ್ಭಪಾತವನ್ನು ಪ್ರತಿಪಾದಿಸುತ್ತಿರುವುದು ನಮಗೆ ತಿಳಿದಿದೆ. ಒಂದು ವೇಳೆ ಪುತಲೀಬಾಯಿಯವರು ಹಾಗೆ ಮಾಡುವುದಾಗಿ ನಿರ್ಧರಿಸಿದ್ದುದಾದಲ್ಲಿ ಮಹಾತ್ಮಾ ಗಾಂಧೀಜಿಯವರು ಇರುತ್ತಿರಲಿಲ್ಲ. ಹಾಗೆನೇ ಭೀಕರ ರೋಗರುಜಿನಗಳಿಂದ ಬಳಲುತ್ತಿರುವವರ ಕಷ್ಟಗಳನ್ನು ಕೊನೆಗೊಳಿಸಲು ದಯಾಮರಣ ಉತ್ತಮ ಆಯ್ಕೆ ಎನ್ನುವವರಿದ್ದಾರೆ. ಒಂದು ವೇಳೆ ಸುಮಾರು 50 ವರ್ಷಗಳ ಕಾಲ ಅಮಿಯೋ ಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಎಂಬ ರೋಗದಿಂದ ಬಳಲುತ್ತಿದ್ದ ಸ್ಟೀಫನ್ ಹಾವ್ಕಿಂಗ್ ಅವರಿಗೆ ದಯೆಯನ್ನು ತೋರಿಸುವ ವಿಧಾನವೆಂದು ದಯಾಮರಣದ ಮೂಲಕ ಅವರ ಜೀವವನ್ನು ಅಂತ್ಯಗೊಳಿಸಿದ್ದಿದರೆ ನಾವೊಬ್ಬ ಶ್ರೇಷ್ಟ ಬೌತಶಾಸ್ತ್ರಜ್ಞನನ್ನು ಕಳಕೊಳ್ಳುತ್ತಿದ್ದೆವು. ಪ್ರತಿಯೊಬ್ಬ ವ್ಯಕ್ತಿಯೂ ದೇವರು ನಮ್ಮ ನಡುವೆ ಇಟ್ಟಿರುವ ಬೆಲೆಬಾಳುವ ನಿಧಿ.
ಕ್ರಿಸ್ಮಸ್ ನಮಗೆ ಮಾನವ ವಿಸ್ಮಯದ ಗಾಢತೆಯನ್ನು ಧ್ಯಾನಿಸಲು ಅನುವುಮಾಡಿ ಕೊಡುತ್ತದೆ. ದೇವರ ಪುತ್ರರು ನಮ್ಮ ನಡುವೆ, ನಮ್ಮೊಳಗಿನ ಒಬ್ಬರಂತೆ ಜನಿಸಿದುದರಲ್ಲಿ ನಮ್ಮ ನಿಜವಾದ ಬೆಲೆಯು ಕಾಣಸಿಗುತ್ತದೆ. ಈ ವಾರ್ತೆಯಲ್ಲಿ ಹರ್ಷಪಡೋಣ. ನಿಮಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಷಯಗಳು.
ಈ ವೇಳೆ ವಂದನೀಯ ಮ್ಯಾಕ್ಸಿಂ ನೊರೊನ್ಹಾ ,ಶ್ರೇಷ್ಠ ಗುರುಗಳು, ಮಂಗಳೂರು ಧರ್ಮಪ್ರಾಂತ್ಯ, ವಂದನೀಯ ವಿಕ್ಟರ್ ಜೋರ್ಜ್ ಡಿಸೋಜಾ, ಚಾನ್ಸಲರ್, ಮಂಗಳೂರು ಧರ್ಮಪ್ರಾಂತ್ಯ, ವಂದನೀಯ ವಿಕ್ಟರ್ ವಿಜೆಯ್ ಲೋಬೊ, ಸಾರ್ವಜನಿಕ ಸಂಪರ್ಕ ಆಧಿಕಾರಿ, ಮಂಗಳೂರು ಧರ್ಮಪ್ರಾಂತ್ಯ, ಮಾರ್ಸೆಲ್ ಮೊಂತೇರೊ, ಸಾರ್ವಜನಿಕ ಸಂಪರ್ಕ ಆಧಿಕಾರಿ, ಮಂಗಳೂರು ಧರ್ಮಪ್ರಾಂತ್ಯ, ವಂದನೀಯ ರಿಚಾರ್ಡ್ ಡಿಸೋಜಾ, ನಿರ್ದೇಶಕರು, ಕೆನರಾ ಸಂಪರ್ಕ ಕೇಂದ್ರ, ಮಂಗಳೂರು ಧರ್ಮಪ್ರಾಂತ್ಯ, ಎಲಿಯಾಸ್ ಫೆರ್ನಾಂಡಿಸ್, ಮಾದ್ಯಮಾ ಸಲಹಾಗಾರರು, ಮಂಗಳೂರು ಧರ್ಮಪ್ರಾಂತ್ಯ ಉಪಸ್ಥಿತರಿದ್ದರು.