ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

Spread the love

ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಉಡುಪಿ: ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆ ಹಾಗೂ ಕ್ರೀಡಾಸ್ಪೂರ್ತಿಯ ಗುಣವನ್ನು ಬೆಳೆಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಅವರು ಪದವಿವೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಸಂತ ಸಿಸಿಲಿ ಸಂಯುಕ್ತ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ , ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಸೋಲು ಗೆಲುವುಗಳನ್ನು ಲೆಕ್ಕಿಸದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ಹಾಗೂ ಶಕ್ತಿಯನ್ನು ತೋರ್ಪಡಿಸಬೇಕು. ಸೋಲುವುದು, ಗೆಲ್ಲುವುದು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ರೋಸ್ ಆ್ಯಗ್ನೇಸ್ ಎ.ಸಿ. ದೀಪ ಬೆಳಗಿಸಿದರು. ಉಡುಪಿ ಶೋಕಮಾತ ಇಗರ್ಜಿಯ ಧರ್ಮಪ್ರಾಂತ್ಯ ಹಾಗೂ ಧರ್ಮಗುರುಗಳಾದ ವಂ.ಫಾ.ವಲೇರಿಯನ್ ಮೆಂಡೋನ್ಸಾ ಆಶೀರ್ವಚನ ನೀಡಿ ಜೀವನದಲ್ಲಿ ಜಯಗಳಿಸಲು ಹೋರಾಡುವುದು ಮುಖ್ಯ, ಅದಕ್ಕಾಗಿ ನಮ್ಮ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಮೊದಲು ಉಡುಪಿ ಜಿಲ್ಲಾ ಪಂಚಾಯತ್‍ನ ಉಪಾಧ್ಯಕ್ಷರಾದ ಶೀಲಾ ಕೆ.ಶೆಟ್ಟಿ ಇವರ ಮುಂದಾಳತ್ವದಲ್ಲಿ ಪಥಸಂಚಲನ ನಡೆಯಿತು. ಉಡುಪಿ ನಗರ ಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ದ್ವಜಾರೋಹಣ ನಡೆಸಿಕೊಟ್ಟರು.

ರಾಷ್ಟ್ರಮಟ್ಟದ ಚಕ್ರ ಎಸೆತ ಮತ್ತು ಗುಂಡು ಎಸೆತದ ಕ್ರೀಡಾಪಟು ಹಾಗೂ ಸಂತ ಸಿಸಿಲಿಯ ಹಳೆ ವಿದ್ಯಾರ್ಥಿಯಾದ ಸ್ಯಾಂಡ್ರಾ ಡಿಸೋಜಾ ಅವರು ಕ್ರೀಡಾಜ್ಯೋತಿ ಪ್ರಜ್ವಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ, ನಗರ ಸಭಾ ಅಧ್ಯಕ್ಷರು ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಉಡುಪಿ ನಗರಸಭಾ ಸದಸ್ಯರಾದ ಯಶ್‍ಪಾಲ್ ಸುವರ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ , ಸಂತ ಸಿಸಿಲಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮರಿಯಾ ಗ್ರೇಸಿ ಎ.ಸಿ., ಸಂತ ಸಿಸಿಲಿಯ ದೈಹಿಕ ಶಿಕ್ಷಣ ಶಿಕ್ಷಕ ದಿನೇಶ್ ಕುಮಾರ್, ವಿವಿಧ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ನಾಯಕ್ ಸ್ವಾಗತಿಸಿದರು. ಉಪನ್ಯಾಸಕಿ ವಸಂತಿ ವಂದಿಸಿದರು. ಸತೀಶ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love