‘ಕ್ಷಮತಾ ಯು ಗೆಟ್ ಇನ್ ಡೈಮಂಡ್ಸ್’ ಶಿಬಿರ ಸಮಾರೋಪ ಸಮಾರಂಭ
ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಕ್ಷಮತಾ ಯೋಜನೆಯಡಿಯಲ್ಲಿ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಹಲವು ನಿಯೋಜನೆಗಳೊಂದಿಗೆ ಉದ್ಯೋಗ ಸಾಮಥ್ರ್ಯಕ್ಕೆ ಸಹಾಯವಾಗುವಂತೆ ಮುಂಬಯಿ ಜ್ಯೋತಿ ಲ್ಯಾಬೊರೆಟರೀಸ ಸಂಸ್ಥೆ (ಉಜಾಲಾ) ಜಂಟಿ ಆಡಳಿತ ನಿರ್ದೇಶಕ ಹಾಗೂ ಸಿ. ಇ. ಒ. ಉಲ್ಲಾಸ ಕಾಮತ್ ರೂಪಿಸಿರುವ 18 ದಿವಸಗಳ ಅವಧಿಯ ‘ಕ್ಷಮತಾ ಯು ಗೆಟ್ ಇನ್ ಡೈಮಂಡ್ಸ್” ಶಿಬಿರದ ಸಮಾರೋಪ ಸಮಾರಂಭ ದಿ. 21-06-2019 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. ‘ವಿಶನ್ ಟಿ. ವಿ. ಎಮ್ 2030’ ಪೂರಕ ವಾಗಿರುವ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕಾಲೇಜುಗಳಲ್ಲಿನ ಆಯ್ದ ಅಂತಿಮ ವರ್ಷದ 63 ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿತ್ತು.
ಯೋಜನೆಯ ಪ್ರಾಯೋಜಕರಾದ ಮುಂಬಯಿ ಜ್ಯೋತಿ ಲ್ಯಾಬೊರೆಟರೀಸ ಸಂಸ್ಥೆ ಜಂಟಿ ಆಡಳಿತ ನಿರ್ದೇಶಕ ಹಾಗೂ ಸಿ. ಇ. ಒ. ಶ್ರೀ ಉಲ್ಲಾಸ ಕಾಮತ್ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬೀಜಭಾಷಣ ಮಾಡಿ, ಯುವಕರಲ್ಲಿ ಜೀವನ ಮೌಲ್ಯಗಳು, ಸಹಜೀವನ, ಉತ್ಸಾಹ ಭರಿತ ಸೇವಾ ಮನೋಭಾವ, ನಾಯಕತ್ವ ಗುಣಗಳ ಅಳವಡಿಕೆ, ಮಾರುಕಟ್ಟೆ ಅನುಭವಗಳ ಕುರಿತಾಗಿ ಮಾತನಾಡಿದರು. ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಕಾರ್ಯಕ್ರಮದ ಅಧ್ಯಕತೆ ವಹಿಸಿ ಈ ತರಬೇತಿ ಶಿಬಿರ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗ ನೀಡಿದೆ ಎಂದು ತಿಳಿಸಿದರು.
ಯುವಕ, ಯುವತಿಯರಿಗೆ ತರಬೇತಿ ನೀಡುವ 18 ದಿನಗಳ ಈ ಶಿಬಿರದಲ್ಲಿ ಹಲವು ತಜ್ಞರಿಂದ ಭೋಧನಾ ತರಗತಿಗಳನ್ನು ಕೂಡಾ ಏರ್ಪಡಿಸಲಾಗಿತ್ತು. ಕ್ಷಮತಾ ಶಿಬಿರ ಸಂಚಾಲಕ ಸಿ. ಎ. ಗಿರಿಧರ ಕಾಮತ್, ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು, ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ಸಹಾಯಕ ನಿರ್ದೇಶಕ ಗುರುದತ್ತ ಬಂಟ್ವಾಳಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಾಗೂ ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳ ಹೆತ್ತವರನ್ನು ಹಾಗೂ ಪಾಲಕರನ್ನು ಕೂಡಾ ಸಮಾರೋಪ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿತ್ತು.
ಶಿಬಿರಾರ್ಥಿಗಳು ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು ಹಾಗೂ ವಿವಿಧ ಚಟುವಟಿಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳು ಶಿಬಿರಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.