
ಗರೀಬ್ ಕಲ್ಯಾಣ ಅನ್ನ ಯೋಜನೆ ನವೆಂಬರ್ ಅಂತ್ಯದವರೆಗೂ ವಿಸ್ತರಣೆ: ಪ್ರಧಾನಿ ಮೋದಿ
ನವದೆಹಲಿ: ಬಡವರಿಗೆ ಉಚಿತ ಪಡಿತರ ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ್ದಾರೆ.
ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಗರೀಬ್ ಕಲ್ಯಾಣ್ ಯೋಜನೆಯನ್ನು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲೂ ಮುಂದುವರಿಸಲಾಗುವುದು ಎಂದಿದ್ದಾರೆ.
ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಬಡವರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಒಂದು ಕೆ.ಜಿ. ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದ 80 ಕೋಟಿ ಜನರಿಗೆ ಇದರ ಲಾಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೊರೋನಾ ವೈರಸ್ ಸೋಂಕನ್ನು ಜನರು ಹಗುರವಾಗಿ ತೆಗೆದುಕೊಳ್ಳಬಾರದು. ಅನ್ಲಾಕ್ ಘೋಷಣೆ ಆದ ಬಳಿಕ ಜನರು ವೈಯಕ್ತಿಕವಾಗಿ ಬಹಳ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಮನಿಸಿದ್ದೇನೆ. ಇಂಥ ಧೋರಣೆ ತರವಲ್ಲ. ಜನರು ಕೊರೋನಾ ವೈರಸ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಲಾಕ್ಡೌನ್ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಲಾಕ್ ಡೌನ್ ನಿಯಮಗಳಿಂದ ಪ್ರಧಾನಿ ಮೋದಿಯೂ ಹೊರತಲ್ಲ. ಯಾರೇ ಆದರೂ ಲಾಕ್ಡೌನ್ ನಿಯಮ ಪಾಲಿಸದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ಧಾರೆ.