ಗೃಹ ರಕ್ಷಕದಳದವರ ಪ್ರಾಮಾಣಿಕ ಕರ್ತವ್ಯ ಶ್ಲಾಘನೀಯ : ಅಣ್ಣಾಮಲೈ
ಉಡುಪಿ: ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕದಳದವರ ಪ್ರಾಮಾಣಿಕ ಕರ್ತವ್ಯಗಳು ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹೇಳಿದ್ದಾರೆ.
ಅವರು ಶುಕ್ರವಾರ ಉಡುಪಿ ಜಿಲ್ಲಾ ಗೃಹ ರಕ್ಷಕದಳದ ಕೇಂದ್ರ ಕಚೇರಿಯಲ್ಲಿ ನಡೆದ ರಕ್ಷಕದಳದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿನ ಕಾನೂನು ಸುವ್ಯವಸ್ಥೆಯ ನಿರ್ವಹಣೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಷ್ಟೇ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಗೃಹ ರಕ್ಷಕ ಸಿಬ್ಬಂದಿಗಳಿಗೂ ಇನ್ನಷ್ಟು ಸೌಲಭ್ಯ ಪಾವತಿಸಿ ಕೊಡುವ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದ ಅವರು ಜಿಲ್ಲೆಯಲ್ಲಿ ಪೊಲಿಸ್ ಅಧಿಕಾರಿಗಳ ಹಾಗೂ ಗೃಹ ರಕ್ಷಕರ ಅಧಿಕಾರಿಗಳ ಸಂಬಂದ ಸುಧಾರಿಸುವ ನಿಟ್ಟಿನಲ್ಲಿ ತಾನು ಪ್ರಯತ್ನಿಸುವುದಾಗಿ ಅವರು ಭರವಸೆ ವ್ಯಕ್ತ ಪಡಿಸಿದರು.
ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಕೆ ಪ್ರಶಾಂತ್ ಶೆಟ್ಟಿ, ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಜಿಲ್ಲಾ ಡೆಪ್ಯಟಿ ಕಮಾಂಡೆಂಟ್ ರಮೇಶ್ ಹಾಗೂ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಜಿಲ್ಲೆಯ ಗೃಹ ರಕ್ಷಕದಳದ ಅಭಿವೃದ್ಧಿಯ ಕುರಿತು ಸಮಾಲೋಚನೆ ನಡೆಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಘಟಕಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಡಾ.ಕೆ ಪ್ರಶಾಂತ್ ಶೆಟ್ಟಿ ಸಾಗತಿಸಿದರು, ರಾಜೇಶ್ ಕೆ.ಸಿ ವಂದಿಸಿದರು.