ಗೋಕಿಂಕರ ಯಾತ್ರೆ – ಸ್ವಾಗತಕ್ಕೆ ಉಡುಪಿ ಸನ್ನದ್ಧ

Spread the love

ಗೋಕಿಂಕರ ಯಾತ್ರೆ – ಸ್ವಾಗತಕ್ಕೆ ಉಡುಪಿ ಸನ್ನದ್ಧ

ಉಡುಪಿ: ಗೋವು ಜೀವ ಜಗತ್ತಿನ ಜೀವಸ್ರೋತ. ಮಾನವನ ಜೀವನದಲ್ಲಂತೂ ಗೋವಿನ ಪ್ರಯೋಜನವು ಹಾಸುಹೊಕ್ಕಾಗಿದೆ. ಗೋವಿಲ್ಲದ ಮಾನವನ ಬದುಕು ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದರಿಂದ ಈ ವಿಶ್ವ ಜನನಿ ಗೋಮಾತೆ ಮಾನವನ ದುಷ್ಕ್ರತ್ಯಕ್ಕೆ ಸಿಲುಕಿ ನಾಶವಾಗುತ್ತಿದೆ.

raghaveshwara

ಗೋವಂಶ ಸಂರಕ್ಷಣೆಗಾಗಿ, ಗೋಮಹತ್ವದ ಅರಿವು ಪ್ರಸರಣವೇ ಸಾಧನವೆಂದರಿತ ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು, ಗೋವಿಗಾಗಿ ಆತ್ಮಾರ್ಪಣೆ ಮಾಡಿದ ಮಂಗಲಪಾಂಡೆಯ ಪ್ರೇರಣೆಯಲ್ಲಿ ‘ಮಂಗಲ ಗೋಯಾತ್ರೆ’ ಯನ್ನು ಸಂಕಲ್ಪಿಸಿದ್ದು, 81 ದಿನಗಳ ಪರ್ಯಂತ ಸಪ್ತ ರಾಜ್ಯ(ಕರ್ನಾಟ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ)ಗಳಲ್ಲಿ ಹಮ್ಮಿಕೊಂಡಿದ್ದಾರೆ.

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಳೆದೆರಡು ದಶಕಗಳಿಂದ ಅನೇಕ ರೀತಿಯ ಕಾರ್ಯಕ್ರಮಗಳು ದೇಶವ್ಯಾಪಿ ನಡೆದಿದ್ದು, ಭಾರತೀಯ ಗೋತಳಿಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ಈ ಬಾರಿ ಶಾಲಾಮಕ್ಕಳಲ್ಲಿ ಗೋವಿನ ಅರಿವು ಮೂಡಿಸುವುದು ಮುಖ್ಯ ಉದ್ದೇಶ. ಜೊತೆಗೆ ರೈತರನ್ನು ಒಗ್ಗೂಡಿಸಿ ಪ್ರತಿದಿನ ಒಂದು ಚರ್ಚೆ, ಕಮ್ಮಟಗಳನ್ನು ಏರ್ಪಡಿಸಿ, ಗಓಸಂಬಂಧಿ ನಿರ್ಣಯಗಳನ್ನು ಮಂಡಿಸಿ, ನಿರ್ಣಯಿಸಲಾಗುತ್ತದೆ.

ಈಗಾಗಲೇ ಗೋಯಾತ್ರೆ, ಗೋಸಂಸತ್, ವಿಶ್ವ ಗೋಸಮ್ಮೇಳನ, ಗೋಸಂಧ್ಯಾ, ಕೋಟಿ ನೀರಾಜನ, ಅಭಯಧಾಮ-ದೀಪಗೋಪುರ, ವಿಶ್ವಮಂಗಳ ಗೋಗ್ರಾಮ ಯಾತ್ರೆಯಂತಹ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿರುವುದು ಭಾರತೀಯ ಗೋಸಂರಕ್ಷಣೆಯ ಮೈಲಿಗಲ್ಲು ಎನಿಸಿದೆ. ಈ ಕಾರ್ಯಕ್ರಮಗಳಿಂದ ಲಕ್ಷಾಂತರ ಗೋಪ್ರೇಮಿಗಳು ನಾಡಿನುದ್ದಕ್ಕೂ ಹುಟ್ಟಿಕೊಂಡಿದ್ದಾರೆ, ಗೋವನ್ನು ಸಾಕಿದ್ದಾರೆ. ಹಲವಾರು ಗೋಶಾಲೆಗಳು ಸ್ಥಾಪನೆಯಾಗಿವೆ. ದೇಶೀ ಗೋತಳಿಗಳ ಸಂರಕ್ಷಣೆಗಾಗಿ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ.

ದೇಶೀ ಗೋ ಆಧಾರಿತ ಕೃಷಿ, ಪಂಚಗವ್ಯಗಳ ಔಷಧ ಬಳಕೆ, ಗವ್ಯಾಯುರ್ವೇದ ಚಿಕಿತ್ಸಾ ಪದ್ಧತಿಯ ಪುನರುತ್ಥಾನ, ಗೋಕೇಂದ್ರಿತ ಜೀವನದ ಮಹತ್ವದ ಅರಿವು, ಆರ್ಥಿಕ, ಸಾಮಾಜಿಕ ವಿಚಾರಗಳಲ್ಲಿ ಗೋವಿನ ಉಪಯೋಗದ ತಿಳುವಳಿಕೆ ಹೀಗೆ ಇದರ ಪರಿಣಾಮ ಅನಂತವಾಗಿದೆ. ಈ ಯಾತ್ರೆಯಿಂದ ಗೋವಿನ ಕುರಿತು ಜನಮಾನಸದಲ್ಲಿ ಹೊಸ ಜಾಗರೂಕತೆಯನ್ನು ಹುಟ್ಟುಹಾಕುವ ಪ್ರಯತ್ನ ಇದಾಗಿದೆ.

ಮಂಗಲ ಗೋಯಾತ್ರೆಯು ಹತ್ತು ಸಾವಿರಕ್ಕೂ ಅಧಿಕ ಕಿಲೋಮೀಟರ್ ದೂರ ಪರಿಕ್ರಮಿಸಿ, ಸಾವಿರಾರು ಹಳ್ಳಿಗಳಲ್ಲಿ ಸಂಚಲನ ಮೂಡಿಸಲಿದೆ. ಲಕ್ಷಾಂತರ ಕಾರ್ಯಕರ್ತರು ಯಾತ್ರೆಯ ಯಶಸ್ಸಿಸಗೆ ಪರಿಶ್ರಮಿಸಲಿದ್ದು, ಕೋಟ್ಯಂತರ ಗೋಭಕ್ತರನ್ನು ತಲುಪಲಿದೆ. ‘ಅಮೃತಪಥ’ ಯಾತ್ರೆಯು ಗೋವುಗಳಿಗೆ ಪ್ಲಾಸ್ಟಿಕ್ ಮುಕ್ತ ಮೇವು ದೊರಕಿಸುವ ಯೋಜನೆಯಾಗಿದೆ. ಸುಮಾರು 2000 ಶಾಲೆಗಳಲ್ಲಿ ಗೋವಿನ ಸಮಸ್ಯೆಗಳು ಹಾಗೂ ಅಮೃತಪಥದ ಕುರಿತು ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಿದ್ದು, ಸಂತ ಮಹಾಂತರು ಗೋಯಾತ್ರೆಯಲ್ಲಿ ಸಾನ್ನಿಧ್ಯವಹಿಸಲಿದ್ದಾರೆ, ಸಾಮಾಜಿಕ ಗಣ್ಯರು ಯಾತ್ರೆಯಲ್ಲಿ ಕೈ ಜೋಡಿಸಲಿದ್ದಾರೆ. ಗೋಯಾತ್ರೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳು, ಗೋವಿನ ಮಹಿಮೆಯನ್ನು ಸಾದರಪಡಿಸುವ ಪ್ರದರ್ಶನಗಳು ನಡೆಯಲಿವೆ. ‘ಗೋರಥ’ವು ಮಹಾನಂದಿಯ ಸ್ವರೂಪದಲ್ಲಿ ಇರಲಿದೆ.

ಭಾರತೀಯ ಪಾರಂಪರಿಕ ಗೋತಳಿಯ ಸಂರಕ್ಷಣೆಯ ಮಹಾ ಅಭಿಯಾನವಾದ ‘ಮಂಗಲ ಗೋಯಾತ್ರೆ’ಯ ಪೂರ್ವಭಾವಿಯಾಗಿ ‘ಗೋ-ಕಿಂಕರಯಾತ್ರೆ’ ಯು ಐದು ರಾಜ್ಯಗಳ ಐದು ಪುಣ್ಯಸ್ಥಳಗಳಿಂದ ಹೊರಡುವ ಯೋಜನೆಯಾಗಿದ್ದು, ತಾ:16-9-2016ರಂದು ಕಾಸರಗೋಡಿನ ಮಧೂರಿನಿಂದ ಪ್ರಾರಂಭಗೊಂಡಿರುತ್ತದೆ. ಉಡುಪಿ ಜಿಲ್ಲೆಯನ್ನು ಇದೇ ಬರುವ ಸಪ್ಟೆಂಬರ್ 23 ರಂದು ರಂದು ಉಡುಪಿ ಜಿಲ್ಲೆಯನ್ನು ಪ್ರವೇಶಿಸಲಿದೆ. ಈ ಯಾತ್ರೆಯು ಪ್ರಮುಖವಾಗಿ ಪಡುಬಿದ್ರೆ, ಕಾಪು, ಉಡುಪಿ, ಬ್ರಹ್ಮಾವರ, ಕುಂದಾಪುರ, ಹೆಬ್ರಿ, ಕಾರ್ಕಳದಾದ್ಯಂತ ಸಪ್ಟೆಂಬರ್ 27 ರ ತನಕ ಜಿಲ್ಲೆಯ ವಿವಿಧ ಧಾರ್ಮಿಕ/ಶೈಕ್ಷಣಿಕ ಕ್ಷೇತ್ರಗಳನ್ನು ಸಂದರ್ಶಿಸಲಿದೆ. ತಾಲೂಕಿನ ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಗೋಸೇವಾ ಪ್ರತಿಜ್ಞೆಯನ್ನು ಸಮೀಕರಿಸಿ, ಕಾರ್ಯಕರ್ತರನ್ನು ಗೋಸೇವಾ ಕಾರ್ಯದಲ್ಲಿ ತೊಡಗಿಸುವುದು ಗೋ-ಕಿಂಕರ ಯಾತ್ರೆಯ ಉದ್ದೇಶವಾಗಿರುತ್ತದೆ.

ಈ ಯಾತ್ರೆಯು ತಾ:23ರಂದು ಸಂಜೆ ಉಡುಪಿಯ ಶ್ರೀಮದನಂತೇಶ್ವರ ದೇವಳದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಗಂಟೆ 5.30ಕ್ಕೆ ಉಡುಪಿಯ ಶ್ರೀಕೃಷ್ಣ ಮಠ ಪ್ರವೇಶಿಸಲಿದೆ. ತದನಂತರ ರಾಜಾಂಗಣ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ. ಪರಮಪೂಜ್ಯ ಪರ್ಯಾಯ ಶ್ರೀ ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಗೋಪೂಜೆ, ಸಭಾಪೂಜೆ ಏರ್ಪಡಲಿದೆ. ಶ್ರೀ ಆದರ್ಶ ಗೋಖಲೆಯವರಿಂದ ಗೋವಿನ ಬಗ್ಗೆ ಪ್ರವಚನ ಏರ್ಪಡಲಿದೆ. ತದನಂತರ ಶ್ರೀ ಶ್ರೀಗಳವರು ಆಶೀರ್ವಚನ ನೀಡಲಿದ್ದಾರೆ.

ಪೇಜಾವರ ಮಠದ ವತಿಯಿಂದ ನಡೆಸಲ್ಪಡುವ ನೀಲಾವರ ಗೋಶಾಲೆಗೆ ಯಾತ್ರೆಯು ಸಪ್ಟೆಂಬರ್ 24 ಬೆಳಿಗ್ಗೆ 9.00 ಗಂಟೆಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಪರಮಪೂಜ್ಯ ಪೇಜಾವರ ಕಿರಿಯ ಶ್ರೀಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ನಂತರ ಯಾತ್ರೆಯು ಮುಂದುವರಿದು ಬ್ರಹ್ಮಾವರ, ಮಂದರ್ತಿ, ಬೆಣ್ಣೆಕುದ್ರು, ಬಾಳೆಕುದ್ರು, ಸಾಲಿಗ್ರಾಮ, ಆನೆಗುಡ್ಡೆ, ಕುಂದಾಪುರ, ಹೆಬ್ರಿ ಕಾರ್ಕಳ ಮೂಲಕ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love